ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಅದರ ಹಣವನ್ನು ಪಡೆಯಬೇಕಾದರೆ ಕಮಿಷನ್ ಪ್ರಮಾಣ ಶೇಕಡಾ 40 ರಿಂದ 50 ಪರ್ಸೆಂಟ್ಗೆ ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಮುಖ್ಯ ಆಯುಕ್ತರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿರುವ ನಮ್ಮ ಗುತ್ತಿಗೆದಾರರಿಗೆ 22 ತಿಂಗಳಿಂದ ಬಿಲ್ ಪಾವತಿಯಾಗಿಲ್ಲ. ತಾವು ಹೊಸ-ಹೊಸ ಆದೇಶಗಳನ್ನು ಹೊರಡಿಸಿರುವುದರಿಂದ ಗುತ್ತಿಗೆದಾರರ ಆರೋಪದಂತೆ ಶೇ 40ರ ಕಮಿಷನ್ ಈಗ ಶೇಕಡಾ 50ರ ಹಂತಕ್ಕೆ ತಲುಪಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಹಾಗೂ ಪದಾಧಿಕಾರಿಗಳು ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನೀಡಿದ ಮನವಿಯಲ್ಲಿ ಹೇಳಿದ್ದಾರೆ.
ತಾವು ಹೊಸ ಹೊಸ ಕಚೇರಿಗಳಿಗೆ ಕಡತಗಳನ್ನು ಪರಿಶೀಲಿಸಲು ಮಂಡಿಸಲು ಆದೇಶಿಸಿದ್ದೀರಿ. ಪ್ರತಿ ಹಂತದಲ್ಲೂ ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕಾಮಗಾರಿ ವೀಕ್ಷಿಸಿ ದೃಢೀಕರಿಸಿರುತ್ತಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿವೀಕ್ಷಿಸಿ, ಅನುಮೋದಿಸಿದ್ದರೂ ಹೆಚ್ಚುವರಿಯಾಗಿ ಬೇರೆ ಬೇರೆ ಕಚೇರಿಯ ಅಧಿಕಾರಿಗಳು ಕಾಮಗಾರಿ ಪರೀಕ್ಷಿಸಲು ಆದೇಶಿಸಿರುವುದರಿಂದ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರಕ್ಕೆ ಶೇ 20, ರಾಜ್ಯಕ್ಕೆ 20 ಕಮಿಷನ್ ಹೋಗ್ತಿದೆ: ಎಸ್.ಎಸ್.ಮಲ್ಲಿಕಾರ್ಜುನ
ಅಧಿಕಾರಿಗಳ ಕೊರತೆಯಿಂದ ಕಾಮಗಾರಿ ಕುಂಠಿತ: ಟಿವಿಸಿಸಿ ವಿಭಾಗ ಮತ್ತು ಗುಣನಿಯಂತ್ರಣ ವಿಭಾಗದಲ್ಲಿ ಅಧಿಕಾರಿಗಳ ಕೊರತೆಯಿಂದ ಕಾಮಗಾರಿಗಳನ್ನು ಪರಿಶೀಲಿಸಲು ತಿಂಗಳಾನುಗಟ್ಟಲೇ ಕಾಯಬೇಕು. ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿ.ಆರ್. ನಮೂದಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಕಡತಗಳನ್ನು ಮಂಡಿಸುವ ಕಚೇರಿಗಳ (ಟೇಬಲ್ಸ್) ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.
ಬಿ.ಆರ್ ನಮೂದಿಸಲು ಗುತ್ತಿಗೆದಾರರಿಗೆ ಅನುವು: ಟಿವಿಸಿಸಿ ವಿಭಾಗದವರು ಕಡತವನ್ನು ಪರಿಶೀಲಿಸಿ ಬಿ.ಆರ್ ನಮೂದಿಸಲು ಎಲ್ಲ ಗುತ್ತಿಗೆದಾರರಿಗೆ ಅನುವು ಮಾಡಿಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 40% ಕಮಿಷನ್ ಆರೋಪ.. WhatsApp ಮೆಸೇಜ್ ಕಳಿಸಿ ಬೆಳಗಾವಿಯ ಗುತ್ತಿಗೆದಾರ ನಾಪತ್ತೆ!
ಇನ್ನೊಂದೆಡೆ, ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ 22 ಸಾವಿರ ಕೋಟಿ ರೂ. ಬಾಕಿ ಇದ್ದು, ಇನ್ನು 15 ದಿನದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ ಕಮಿಷನ್ ಬೇಡಿಕೆ ಇಡುತ್ತಿರುವ ಕುರಿತು ಪತ್ರ ಬರೆಯುವುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಸಿದ್ದರಾಮಯ್ಯ ಭೇಟಿ ಮಾಡಿದ ಕೆಂಪಣ್ಣ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಕುಮಾರಪಾರ್ಕ್ ಪಶ್ಚಿಮದಲ್ಲಿರುವ ಅಧಿಕೃತ ನಿವಾಸಕ್ಕೆ ಆಗಮಿಸಿದ ಕೆಂಪಣ್ಣ, ಸರ್ಕಾರದಿಂದ ಗುತ್ತಿಗೆದಾರರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು. ಕಮಿಷನ್ ಬೇಡಿಕೆ ಬಗ್ಗೆ ಪ್ರಸ್ತಾಪಿಸಿ ಮತ್ತೊಮ್ಮೆ ಮೋದಿಗೆ ಪತ್ರ ಬರೆಯುವ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದರು. ನಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ,15 ದಿನಗಳಲ್ಲಿ ಮತ್ತೆ ಪ್ರಧಾನಿಗೆ ಪತ್ರ ಬರೆಯುತ್ತೇವೆ, ನಮ್ಮ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು ಸಿಎಂ ಮಾತನ್ನು ಕೇಳದ ಸ್ಥಿತಿ ನಿರ್ಮಾಣ ಆಗಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು.ಆದರೆ ಸಿಎಂ ಮಾತೇ ಕೇಳ್ತಾ ಇಲ್ಲ, ತನಿಖೆ ಮಾಡಿದಾಗ ದಾಖಲೆ ಕೊಡುತ್ತೇವೆ. ನ್ಯಾಯಾಂಗ ತನಿಖೆ ಮಾಡಲಿ, ನಾನು ದಾಖಲೆ ಕೊಟ್ಟರೆ ಗುತ್ತಿಗೆದಾರರಿಗೆ ತೊಂದರೆ ಕೊಡ್ತಾರೆ ಎಂದರು.
ಇದನ್ನೂ ಓದಿ: ಬಾಕಿ ಬಿಲ್ ಪಾವತಿಗೆ 30-40ರಷ್ಟು ಕಮಿಷನ್ ಪರಿಸ್ಥಿತಿ; ರಾಜ್ಯಪಾಲರಿಗೆ ಗುತ್ತಿಗೆದಾರರಿಂದ ಪತ್ರ
ಮುನಿರತ್ನ ವಿರುದ್ಧ ಕಮಿಷನ್ ಆರೋಪ: ಮೊದಲು40 % ರಷ್ಟು ಕಮಿಷನ್ ಇತ್ತು. ಈಗ ಕೆಲವು ಹಂತಗಳಲ್ಲಿ ಬದಲಾವಣೆ ಆಗಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಲೆಕ್ಷನ್ ಮಾಡಿಕೊಡಲು ಹೇಳಿದ್ದಾರೆ. ಇವರು ಕರೆಪ್ಟ್ ಆಗಿದ್ದಾರೆ. ನಮಗೆ ಈಗ ಬಂದಿರುವ ವರದಿ ಪ್ರಕಾರ ಕಮಿಷನ್ ಕೇಳಿದ್ದಾರೆ. ಸಿಎಂ ಬಗ್ಗೆ ನಮಗೆ ಗೌರವ ಇದೆ. ಆದರೆ ಪರಿಸ್ಥಿತಿ ಸರಿಯಿಲ್ಲ, 22 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. 3 ವರ್ಷಗಳಿಂದ ಬಿಲ್ ಬಾಕಿ ಇದೆ. ಕೆಲವು ಸಚಿವರು, ಡಬ್ಲ್ಯೂಡಿ ಸಚಿವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನ ಮಾಡಿದರು. ಇಂತಹ ಭ್ರಷ್ಟ ಸರ್ಕಾರ ನಾನು ಜೀವನದಲ್ಲಿ ನೋಡಿಲ್ಲ ಎಂದರು
ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ: ಪ್ರಧಾನಿ ಮಧ್ಯಸ್ಥಿಕೆಗೆ ಕೈ ಸಂಸದರ ಆಗ್ರಹ