ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ನಡೆದ ಸಭೆ, ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರಾಕರಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಪ್ರಮುಖರು ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಸಿದ್ದರು ಎನ್ನಲಾಗಿದೆ. ಆದರೆ, ಸಭೆಯಲ್ಲಿ ಹಾಜರಾಗಿರುವ ಕುರಿತು ಮಾಹಿತಿ ನೀಡಲು ತುಷಾರ್ ಗಿರಿನಾಥ್ ಹಿಂದೇಟು ಹಾಕಿದರು.
ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ರಾಜ್ಯ ಬಿಜೆಪಿ ಘಟಕ ದೂರು ನೀಡಲು ಮುಂದಾಗಿರುವ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ, ನಿನ್ನೆ ನಾವು ಹೊಟೇಲ್‌ಗೆ ಹೋಗಿದ್ದು ನಿಜ. 11 ಗಂಟೆಗೆ ಡಿಸಿಎಂ ಪರಿಶೀಲನೆ ಆರಂಭವಾಗಬೇಕಿತ್ತು. ನಾವು ಅವರಿಗೆ ಮಾಹಿತಿ ನೀಡಲು ಹೋಗಿದ್ದೆವು ಎಂದರು. ಅಲ್ಲದೆ, ನಾನು ಹಾಗೂ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಇದ್ದರು. ಬಿಜೆಪಿಯ ಆರೋಪಗಳಿಗೆ ನಾವು ಉತ್ತರ ನೀಡಲು ಆಗುವುದಿಲ್ಲ ಎಂದು ಹೇಳಿದರು.
ಕೆಳಸೇತುವೆಗಳಲ್ಲಿ ನೀರು ಎಷ್ಟು ನಿಂತಿದೆ ಎಂದು ಗುರುತಿಸಲು ಮೀಟರ್ ಅಳವಡಿಕೆ: ರಾಜಧಾನಿಯಲ್ಲಿ ಇತ್ತೀಚಿಗೆ ಸಂಭವಿಸಿದ ಅಂಡರ್ ಪಾಸ್ ದುರಂತದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕೆಳಸೇತುವೆಗಳಲ್ಲಿ ತುರ್ತಾಗಿ ಸಿಸಿಟಿವಿ, ದೀಪಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಗಾಲ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ತಯಾರಿ ಕುರಿತು ಪ್ರತಿ ವರ್ಷದಂತೆ ವಿಶೇಷ ಸಭೆ ನಡೆಸಲಾಗುತ್ತಿದೆ. ಅದರಂತೆ ಇಂದೂ ಸಹ ಸಭೆ ನಡೆದಿದ್ದು, ಎಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಪ್ರವಾಹ ಉಲ್ಬಣಗೊಳ್ಳುವ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸುವಂತೆ ಹೇಳಿದ್ದೇನೆ ಎಂದರು.
ಇನ್ನೂ ಕೆಳಸೇತುವೆಗಳಲ್ಲಿ ಮಳೆ ನೀರು ನಿಂತು ಉಂಟಾಗುವ ಅನಾಹುತ ಕುರಿತು ವಿಶೇಷ ಜಾಗೃತಿ ಇಟ್ಟುಕೊಂಡಿದ್ದು, ಕಡ್ಡಾಯವಾಗಿ ಕೆಳಸೇತುವೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ದೀಪ ಹಾಗೂ ನೀರು ಎಷ್ಟು ನಿಂತಿದೆ ಎಂದು ಸಾರ್ವಜನಿಕರು ಗುರುತಿಸಲು ಮೀಟರ್ ಅಳವಡಿಕೆ ಮಾಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಕೆಳಸೇತುವೆಗಳ ಮಾಹಿತಿ ಸಾರ್ವಜನಿಕರಿಗೆ ಮುಕ್ತ: ಕೆಳಸೇತುವೆಗಳ ಮಾಹಿತಿಯನ್ನು ಪಾಲಿಕೆ ವೆಬ್‌ಸೈಟ್‌ಗಳಲ್ಲಿ ಉಲ್ಲೇಖ ಮಾಡಲಾಗಿದ್ದು, ಬರೋಬ್ಬರಿ 41 ಕೆಳಸೇತುವೆಗಳ ಮಾಹಿತಿಯನ್ನು ಸಾರ್ವಜನಿಕರು ಮುಕ್ತವಾಗಿ ಪಡೆದುಕೊಳ್ಳಬಹುದು. ಎಲ್ಲಿ ಕಾಮಗಾರಿ ನಡೆಯುತ್ತಿದ್ದೇಯೋ, ಅಲ್ಲಿ ಹೋಗಿ ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವಂತೆ ಸಂಭಂದಿಸಿದ ಅಧಿಕಾರಿಗಳಿಗೆ ಹೇಳಲಾಗಿದೆ ಎಂದರು.
ಇದನ್ನೂ ಓದಿ: ಸುರ್ಜೇವಾಲಾ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು: ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ