ಬೆಂಗಳೂರು: ನಗರದ 8 ವಲಯಗಳಿಗೆ ಕಾನೂನು ಅಗತ್ಯತೆಗಳ ಕುರಿತಂತೆ ಗಮನ ಹರಿಸುವುದಕ್ಕಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್ಗೆ ತಿಳಿಸಿದೆ. ನಗರದ ಬನಶಂಕರಿಯಲ್ಲಿ ನೆರೆಯ ನಿವಾಸಿಯೊಬ್ಬರು ಕಟ್ಟಡ ಪರವಾನಗಿ ಉಲ್ಲಂಘಿಸಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆಕ್ಷೇಪಿಸಿ ವೆಂಕಟೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಬಿಬಿಎಂಪಿ ಈ ಮಾಹಿತಿ ನೀಡಿದೆ.
ಪ್ರಕರಣ ಸಂಬಂಧ ಈ ಹಿಂದೆ ನಡೆಸಿದ್ದ ವಿಚಾರಣೆ ವೇಳೆ ಮಾ.24ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಬಿಬಿಎಂಪಿಯ ಕಾನೂನು ಘಟಕದ ಮುಖ್ಯಸ್ಥರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿತ್ತು. ಈ ಹಿನ್ನೆಲೆ ವಿಚಾರಣೆಯಲ್ಲಿ ಭಾಗಿಯಾಗಿದ್ದ ಬಿಬಿಎಂಪಿ ಕಾನೂನು ಘಟಕದ ಮುಖ್ಯಸ್ಥ ಚಂದ್ರಶೇಖರ್ ಪಾಟೀಲ್ ಅವರು, ಹಿಂದೆ ಹಲವಾರು ತಪ್ಪುಗಳಾಗಿವೆ. ಬಿಬಿಎಂಪಿ ಕಾನೂನು ಅಗತ್ಯಗಳು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ತುರ್ತಾಗಿ ಅಗತ್ಯ ಕ್ರಮಕೈಗೊಳ್ಳಲು ಬಿಬಿಎಂಪಿ ವಕೀಲರಿಗೆ ಸೂಚನೆ ನೀಡಲು 8 ವಲಯಗಳಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಬಿಬಿಎಂಪಿ ಅಧಿಕಾರಿಗಳು, ಕಾನೂನು ಅಧಿಕಾರಿಗಳು ಮತ್ತು ಬಿಬಿಎಂಪಿಯ ವಕೀಲರ ನಡುವೆ ಸುಲಭವಾಗಿ ಸಂವಹನ ಸಾಧ್ಯವಾಗಿಸುವ ನಿಟ್ಟಿನಲ್ಲಿ ಬಿಬಿಎಂಪಿಯಲ್ಲಿ ಸಿಸಿಎಂಎಸ್ ವೇದಿಕೆ ಜಾರಿಗೆ ಸಂಬಂಧಿಸಿದಂತೆ ಇ-ಆಡಳಿತ ಇಲಾಖೆಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ. ಇಂತಹ ಕೋರಿಕೆ ಸಲ್ಲಿಸಿದರೆ ಇ-ಆಡಳಿತ ಇಲಾಖೆಯ ಕಾರ್ಯದರ್ಶಿಯು ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅದನ್ನು ತಕ್ಷಣ ಜಾರಿಗೊಳಿಸಬೇಕು. ಅಲ್ಲದೇ, ಈ ಸಂಬಂಧ ವರದಿಯನ್ನು ತಕ್ಷಣ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಮಾಂಸ ಮಾರಾಟ ನಿಷೇಧ: ಮಹಾವೀರ ಜಯಂತಿಯ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದು ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ನಿಷೇಧಿಸಿದೆ. ಏ.4 ರ ಮಹಾವೀರ ಜಯಂತಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎನ್ನುವ ಸುತ್ತೋಲೆಯನ್ನು ಜಂಟಿ ನಿರ್ದೇಶಕರು (ಪಶುಪಾಲನೆ) ಹೊರಡಿಸಿದ್ದಾರೆ.
ಇದನ್ನೂ ಓದಿ: ಏ. 4 ಮಹಾವೀರ ಜಯಂತಿ.. ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಸುತ್ತೋಲೆ
ಮೊಬೈಲ್ ಆಪ್ ಅಭಿವೃದ್ಧಿ: ನಗರ ಮತದಾರರನ್ನು ಮತದಾನ ಪ್ರಕ್ರಿಯೆಗೆ ಆಕರ್ಷಿಸಲು ಜಿಲ್ಲಾ ಚುನಾವಣಾ ಕಚೇರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಂಟಿಯಾಗಿ ಹೊಸ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುತ್ತಿದೆ. ಈ ಅಪ್ಲಿಕೇಶನ್ ಮತಗಟ್ಟೆಗಳಲ್ಲಿನ ಪರಿಸ್ಥಿತಿಯ ನೈಜ-ಸಮಯದ ನವೀಕರಣಗಳನ್ನು ನೀಡುತ್ತದೆ. ನಾವು ಮತಗಟ್ಟೆಗಳ ಸಮೀಪ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು ಮತದಾರರಿಗೆ ಖುಷಿ ಸುದ್ದಿ: ಮತದಾನದ ವೇಳೆ ಉದ್ದನೆಯ ಕ್ಯೂ ತಪ್ಪಿಸಲು ಮೊಬೈಲ್ ಆಪ್ ಅಭಿವೃದ್ಧಿ