ಬೆಂಗಳೂರು: ಯಾರು ಎಷ್ಟೇ ದೊಡ್ಡ ವ್ಯಕ್ತಿ, ಪ್ರಭಾವಿಗಳಾದರೂ ಅವರನ್ನು ಶಿಕ್ಷೆಗೊಳಪಡಿಸುತ್ತೇವೆ ಎಂದು ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಡ್ರಗ್ಸ್ ದಂಧೆಯಲ್ಲಿ ರಾಜಕೀಯ ನಾಯಕರ ಮಕ್ಕಳ ಪಾತ್ರದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಪ್ರಕರಣ ಸಂಬಂಧ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಸಾಕ್ಷಿ ಆಧಾರದಲ್ಲಿ ವಿಚಾರಣೆಗೆ ಕರೆಸುತ್ತೇವೆ. ಹೊಸ ಹೊಸ ಸಾಕ್ಷಿಗಳು ಸಿಗುತ್ತಿವೆ. ಅವರು ಯಾವುದೇ ರಂಗದವರಾಗಿರಲಿ, ಪ್ರಭಾವಿಗಳಾಗಿರಲಿ. ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದರೆ ಅವರನ್ನು ವಿಚಾರಣೆಗೂ ಒಳಪಡಿಸುತ್ತೇವೆ. ಶಿಕ್ಷೆಗೂ ಒಳಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಆರು ತಿಂಗಳಿಂದ ನಡೆಯುತ್ತಿದೆ. ಎನ್ಸಿಬಿ ಅವರು ಟ್ವೀಟ್ ಮಾಡಿದ ಮೇಲೆ ಅನೇಕ ಜನ ಮಾತಾಡಿದ್ದರು. ಡ್ರಗ್ಸ್ ಸಂಬಂಧ ಹೇಳಿಕೆ ಕೊಟ್ಟವರನ್ನೂ ಕರೆದು ವಿಚಾರಣೆ ಮಾಡುತ್ತಿದ್ದೇವೆ. ನಮ್ಮದೇ ಆದ ಮಾಹಿತಿಯಿಂದ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಾಲ ಪತ್ತೆಗೆ ಕ್ರಮ ತೆಗೆದುಕೊಳ್ತಿದ್ದೇವೆ. ಬೆಂಗಳೂರಿನಲ್ಲಿ ರೇವ್ ಪಾರ್ಟಿಗಳಲ್ಲಿ ಭಾಗಿಯಾದವರ ಬಗ್ಗೆ ತನಿಖೆ ಆಗ್ತಿದೆ. ಸಾಕ್ಷಿ ಆಧಾರ ಕಲೆ ಹಾಕಲಾಗ್ತಿದೆ ಎಂದರು.
ಬರುವ ದಿನಗಳಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಕೇವಲ ಸಿಸಿಬಿ ಮಾತ್ರ ಮಾಡಲ್ಲ. ಪ್ರತಿ ಸ್ಟೇಷನ್ನಲ್ಲಿ ಈ ಕೆಲಸ ಆಗುತ್ತದೆ. ಈ ಸಂಬಂಧ ಸೂಚನೆ ನೀಡಲಾಗಿದೆ. ದೊಡ್ಡ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ. ತನಿಖೆಯಿಂದ ಹೊಸ ಹೊಸ ಸಾಕ್ಷಿ ಸಿಗ್ತಿವೆ. ತನಿಖೆ ನಡೆಯುತ್ತಿದೆ. ಎಲ್ಲವೂ ತಿಳಿಯಲಿದೆ ಎಂದು ತಿಳಿಸಿದರು.
ನೊಟೀಸ್ ಕೊಟ್ಟರು ನಟಿ ರಾಗಿಣಿ ವಿಚಾರಣೆಗೆ ಬಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಅವರು ಆ ಬಗ್ಗೆ ಕ್ರಮ ತಗೋತಾರೆ. ಊಹಾಪೋಹದ ಮೇಲೆ ಯಾರ ಹೆಸರು ಹೇಳುವುದಿಲ್ಲ. ಸಾಕ್ಷಿ ಆಧಾರ ಇಟ್ಟುಕೊಂಡು ನೊಟೀಸ್ ಕೊಡ್ತಾರೆ. ಯಾವುದೇ ರಂಗದವರು ಇದ್ದರು ಯಾರನ್ನೂ ಬಿಡೋದಿಲ್ಲ. ಎಷ್ಟೇ ಪ್ರಭಾವಿಗಳು ಇದ್ದರು ಕ್ರಮ ತಗೋತೀವಿ. ಇದರ ಹಿಂದೆ ಯಾರೇ ಇದ್ದರು ಕ್ರಮ ತೆಗೆದುಕೊಳ್ತೀವಿ ಎಂದು ಸ್ಪಷ್ಟಪಡಿಸಿದರು.