ಬೆಂಗಳೂರು: ಸಂಗೊಳ್ಳಿ ರಾಯಣ್ಣನ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಬೇಡಿಕೆ ಇದ್ದರು ಅದನ್ನು ಈಡೇರಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಹಾಗೂ ಬಿ.ಬಿ.ಎಂ.ಪಿ. ವತಿಯಿಂದ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ 224ನೇ ಜಯಂತ್ಯುತ್ಸವದ ಅಂಗವಾಗಿ ಕೆ.ಎಸ್.ಆರ್ ರೈಲ್ವೆ ನಿಲ್ದಾಣದ ಎದುರಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಗೊಳ್ಳಿ ಹಾಗೂ ನಂದಗಡ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಸೈನಿಕ ಶಾಲೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸಂಪೂರ್ಣ ಸಜ್ಜಾದ ಬಳಿಕ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ವಹಿಸಿಕೊಟ್ಟು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ದೇಶ ಕಾಯುವ ವೀರಯೋಧರನ್ನು ಸಿದ್ಧಪಡಿಸುವ ಕಾರ್ಯಕ್ಕೆ ಈ ಶಾಲೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ವಸ್ತುಸಂಗ್ರಹಾಲಯ ಸಹ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ 80 ಕೋಟಿ ರೂಪಾಯಿ ಮೊತ್ತವನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡುವ ಮಂಜೂರಾತಿ ನೀಡಿದ್ದರು. ಈ ಮೊತ್ತವನ್ನು ಬಿಡುಗಡೆಗೊಳಿಸಲು ಬದ್ಧವಾಗಿದ್ದೇನೆ ಎಂದು ಸಿಎಂ ಘೋಷಿಸಿದರು.
ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ:
ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರ್ಕಾರಿ ಆದೇಶ ಹೊರಡಿಸಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಇಟ್ಟು ಆಚರಣೆ ಮಾಡುವಂತೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಎಲ್ಲಾ ತಾಲೂಕು ಕೇಂದ್ರಗಳಿಗೂ ವಿಸ್ತರಿಸುತ್ತೇವೆ. ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸುವಂತೆ ಮನವಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಈ ವಿಚಾರವನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ, ಒಂದು ಉತ್ತಮ ಸ್ಥಳ ಗುರುತಿಸಿ, ಅಲ್ಲಿ ಮೂರ್ತಿ ಸ್ಥಾಪನೆ ಮಾಡುವುದಕ್ಕೆ ಶಕ್ತಿಮೀರಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರನ್ನು ಇಡಲು ಕೇಂದ್ರದ ಜೊತೆ ಸಮಾಲೋಚಿಸುತ್ತೇನೆ ಎಂದು ಭರವಸೆ ನೀಡಿದರು.
ಬೆಳ್ಳಿ ಗದೆ ಸಮರ್ಪಣೆ:
ಸಚಿವ ಎಂಟಿಬಿ ನಾಗರಾಜ್ ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಳ್ಳಿ ಗದೆ ನೀಡಿ ಗೌರವಿಸಿದರು. ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿನಲ್ಲಿ ಇಂದು ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವಿಟ್ಟು, ಪುಷ್ಪಾರ್ಚನೆ ಮಾಡಿ ಸಮಾರಂಭ ಆಯೋಜಿಸುವಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದಕ್ಕೆ ಎಂಟಿಬಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಹೆಚ್‌ಎಂ ರೇವಣ್ಣ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂಟಿಬಿ ನಾಗರಾಜ್, ಆರ್ ಅಶೋಕ್, ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್, ಗೌರವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ನನ್ನ ಆಡಳಿತ ಜನಪರ, ಜನೋಪಯೋಗಿ, ಜನಸ್ನೇಹಿಯಾಗಿರಲಿದೆ:
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೊಮ್ಮಾಯಿ, ನನ್ನ ಆಡಳಿತ ದಕ್ಷ, ಪಾರದರ್ಶಕವಾಗಿರುತ್ತದೆ. ಜನಪರವಾದ ಬದಲಾವಣೆಯನ್ನು ತರಬೇಕಾಗಿದೆ. ಆಳುವ ವರ್ಗದವರು ಜನಸ್ನೇಹಿಯಾಗಿರಬೇಕು. ವಿಧಾನಸಭೆ, ವಿಧಾನ ಪರಿಷತ್ ಜನಸ್ನೇಹಿಯಾದ ಕಾನೂನುಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕು. ಜನಪರವಾದ ಆಡಳಿತ, ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲು ಸಂಕಲ್ಪ ಮಾಡಿದ್ದೇನೆ. ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತೇನೆ. ಜನಪ್ರಿಯರಾಗುವುದು ಸುಲಭ, ಆದರೆ ಜನೋಪಯೋಗಿ ಆಗಬೇಕು. ನಮ್ಮ ಆಡಳಿತ ಜನೋಪಯೋಗಿ ಆಗಿರಬೇಕು ಎಂಬುದೇ ನನ್ನ ಉದ್ದೇಶ ಎಂದು ಹೇಳಿದ್ರು.