ಬೆಂಗಳೂರು: ಹೃದಯದ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಇನ್ನಷ್ಟು ಸಮಯದ ನಂತರವೇ ರಾಜಕೀಯ ಚಟುವಟಿಕೆಗೆ ಮರಳಲಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬೊಮ್ಮಾಯಿ ಗುಣಮುಖರಾಗಿದ್ದಾರೆ. ಅಕ್ಟೋಬರ್ 15 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಒಂದು ವಾರದ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಆರ್.ಟಿ.ನಗರದಲ್ಲಿರುವ ನಿವಾಸಕ್ಕೆ ಮರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರ್.ಟಿ ನಗರದಲ್ಲಿರುವ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್, ಬಸವರಾಜ್ ಬೊಮ್ಮಾಯಿ ಸರ್ಜರಿ ಆದ ಮೇಲೆ ಸುಧಾರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಬೇಗ ಗುಣಮುಖರಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯತಿಳಿಸಿದ ಕಟೀಲ್, ಈ ವರ್ಷ ಎಲ್ಲರಿಗೂ ಶುಭ ತರಲಿ. ದೇಶಕ್ಕೆ ಒಳಿತಾಗಲಿ. ಕರ್ನಾಟಕ ಅಭಿವೃದ್ಧಿ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಷ್ಟೇ ಹೇಳಿದರು. ತಮಿಳುನಾಡಿಗೆ ಬಿಜೆಪಿ ನಿಯೋಗ ಹೋಗುವ ವಿಚಾರದ ಕುರಿತು ಮಾತನಾಡಿ, ಅಲ್ಲಿ ಹಿಂದೂ ವಿರೋಧಿ ನೀತಿ ನಡೆಯುತ್ತಿದೆ. ಹಾಗಾಗಿ ಅಲ್ಲಿ ಏನು ನಡೆಯುತ್ತಿದೆ ಅಂತ ವರದಿ ತರಲು ನಿಯೋಗವನ್ನು ಕಳಿಸಲಾಗುತ್ತಿದೆ ಎಂದರು.
ಬೊಮ್ಮಾಯಿ ಆರೋಗ್ಯ ವಿಚಾರಿಸಿದ್ದ ಪ್ರಧಾನಿ ಮೋದಿ: ಇತ್ತೀಚಿಗೆ, ಪ್ರಧಾನಿ ನರೇಂದ್ರ ಮೋದಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಬಸವರಾಜ ಬೊಮ್ಮಾಯಿ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ದೂರವಾಣಿ ಮೂಲಕ ಕರೆ ಮಾಡಿ ಬೊಮ್ಮಾಯಿ ಆರೋಗ್ಯ ವಿಚಾರಿಸಿದ್ದರು. ಕರೆ ಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಶುಭ ಕೋರಿದ್ದರು. ಆರೋಗ್ಯದ ಕಡೆ ಗಮನ ಕೊಡುವಂತೆ ಸಲಹೆ ನೀಡಿದ್ದರು.