ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿಗೆ ಕುಳಿತಿರುವ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿಯಾಗಿ ಮನವೊಲಿಸುವ ಪ್ರಯತ್ನ ನಡೆಸಿದರು.
ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ರಾತ್ರಿ ಧರಣಿಗೆ ತೀರ್ಮಾನಿಸಿ, ಇಂದಿನಿಂದ ಆರಂಭಿಸಿದ್ದಾರೆ. ವಿಧಾನಸಭೆ ಸದಸ್ಯರ ಜೊತೆ ಸಮಾಲೋಚಿಸಿದ ನಂತರ ಕಾಂಗ್ರೆಸ್ನ ಎಲ್ಲ ಸದಸ್ಯರು ವಿಧಾನಪರಿಷತ್ ಬಾವಿಯಲ್ಲಿ ಧರಣಿ ಆರಂಭಿಸಿದ್ದಾರೆ.
ಈಗಾಗಲೇ ಕೆಳಮನೆ ನಾಯಕರ ಜೊತೆ ಚರ್ಚಿಸಿದ್ದು, ಮೇಲ್ಮನೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾದ ಬಿ.ಕೆ. ಹರಿಪ್ರಸಾದ್ ಸಮಾಲೋಚನೆ ನಡೆಸಿದ್ದಾರೆ. ಅಲ್ಲಿ ಧರಣಿ ನಡೆಸಲು ತೀರ್ಮಾನ ಕೈಗೊಂಡಿದ್ದು, ನಾವು ಸಹ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.
ಸಭಾಪತಿ ಮನವೊಲಿಕೆ ಯತ್ನ: ವಿಧಾನಪರಿಷತ್ನಲ್ಲಿ ರಾತ್ರಿ ಧರಣಿ ನಿರತ ಕಾಂಗ್ರೆಸ್ ನಾಯಕರ ಮನವೊಲಿಸುವ ಪ್ರಯತ್ನವನ್ನು ಸಭಾಪತಿ ಬಸವರಾಜ್ ಹೊರಟ್ಟಿ ಮಾಡಿದ್ದಾರೆ. ಧರಣಿ ನಿರತ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಇತರ ಸದಸ್ಯರನ್ನು ಭೇಟಿಯಾಗಿ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಧರಣಿ ನಿರತ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಜೊತೆ ಸಿಎಂ ಚರ್ಚೆ; ಬಿಎಸ್ವೈ ಜೊತೆಗೂಡಿ ಮನವೊಲಿಕೆಗೆ ಯತ್ನ
ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಮಂತ್ರಿಗಳು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಸಮಾಲೋಚಿಸಿದ್ದಾರೆ. ಇದಾದ ಬಳಿಕ ವಿಧಾನಪರಿಷತ್ಗೆ ತೆರಳಿ ಸಮಾಲೋಚಿಸುವ ಸಾಧ್ಯತೆ ಇದೆ.
ಬಿಜೆಪಿ ನಾಯಕರ ಮನವೊಲಿಕೆಗೆ ಕಾಂಗ್ರೆಸ್ ಸದಸ್ಯರು ಬಗ್ಗುವ ಸಾಧ್ಯತೆ ಕಡಿಮೆ ಇದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಮನ ಪರಿವರ್ತನೆಯಾದರೆ, ಅದು ವಿಧಾನಪರಿಷತ್ತಿನಲ್ಲೂ ಪರಿಣಾಮ ಬೀರಲಿದೆ. ಎರಡೂ ಸದನದಲ್ಲಿ ಧರಣಿ ವಾಪಸ್ ಪಡೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಇಂದು ರಾತ್ರಿ ವಿಧಾನಪರಿಷತ್ನಲ್ಲಿಯೇ ವಾಸ್ತವ್ಯ ಹೂಡಲಿರುವ ಕಾಂಗ್ರೆಸ್ ನಾಯಕರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸಭಾಪತಿಗಳೇ ಕಲ್ಪಿಸಲಿದ್ದಾರೆ.