ಬೆಂಗಳೂರು: ವೆಂಕಟೇಶ್ವರ ಅಭಿವೃದ್ಧಿಯ ಸಂಕೇತ. ಇಡೀ ಕರ್ನಾಟಕ ಅಭಿವೃದ್ಧಿಯಾಗಿ ಸಮೃದ್ಧಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ. ಹಿಂದೆಂದೂ ಕಾಣದ ಅಭಿವೃದ್ಧಿ ಈ ಬಾರಿ ಆಗಲಿ ಎಂದು ಅಪೇಕ್ಷೆ ಪಡುತ್ತೇನೆ. ನಾನು ದೇವರ ಬಳಿ ಚುನಾವಣೆ ಗೆಲ್ಲುವ ಬಗ್ಗೆ ಬೇಡಿಕೊಳ್ಳಲ್ಲ ಎಂದು ವೈಕುಂಠ ಏಕಾದಶಿ ಪ್ರಯುಕ್ತ ನಗರದ ವೈಯ್ಯಾಲಿಕಾವಲ್‌ನಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದು ವೈಕುಂಠ ಏಕಾದಶಿ. ಈ ದಿನ ಹಿಂದುಗಳಿಗೆ ಬಹಳ ಪವಿತ್ರ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕು ಎನ್ನುವ ಪ್ರತೀತಿ ಇದೆ. ಹಾಗಾಗಿ, ತಿರುಪತಿಗೆ ಕೋಟಿಗಟ್ಟಲೆ ಜನ ಬಂದು ದರ್ಶನ ಮಾಡುತ್ತಿದ್ದಾರೆ. ನಾನು ಅಲ್ಲಿಗೆ ಹೋಗಿ ದರ್ಶನ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಇಲ್ಲಿ ದರ್ಶನ ಮಾಡುತ್ತಿದ್ದೇನೆ. ದೇವರ ದರ್ಶನ ಪಡೆದುಕೊಂಡ ಬಳಿಕ ಪುನೀತನಾದೆ ಎಂಬ ಭಾವನೆ ಬಂದಿದೆ. ಇಡೀ ರಾಜ್ಯ ಅಭಿವೃದ್ಧಿ, ಸಮೃದ್ಧಿ ಆಗಲಿ ಎಂದು ಬೇಡಿಕೊಂಡಿದ್ದೇನೆ. ಈ ವರ್ಷ ವೆಂಕಟೇಶ್ವರನ ಆಶೀರ್ವಾದ ನಮ್ಮ ಕರ್ನಾಟಕದ ಜನತೆಗೆ ಇರಲಿದೆ, ವೆಂಕಟೇಶ್ವರ ಅಭಿವೃದ್ಧಿಯ ಸಂಕೇತ. ಇಡೀ ಕರ್ನಾಟಕ ಅಭಿವೃದ್ಧಿಯಾಗಿ ಸಮೃದ್ಧಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಡೆತ್ ನೋಟ್ನಲ್ಲಿ ಲಿಂಬಾವಳಿ ಹೆಸರು ಕುರಿತು ತನಿಖೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಬರೆದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಬಂಧದ ತನಿಖೆ ನಡೆಯುತ್ತಿದೆ. ಕಾನೂನು ರೀತಿ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಸಿದ್ದೇಶ್ವರ ಶ್ರೀಗಳು ದೀರ್ಘಕಾಲ ನಮ್ಮೊಂದಿಗಿರಲಿದ್ದಾರೆ: ಸಿದ್ದೇಶ್ವರ ಶ್ರೀಗಳಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ರೀತಿಯಲ್ಲೂ ಆರೋಗ್ಯ ಸಹಜ ಸ್ಥಿತಿಯಲ್ಲಿದೆ. ಪ್ರಧಾನ ಮಂತ್ರಿಗಳ ಧ್ವನಿಯನ್ನು ಕೂಡ ಗುರುತಿಸಿದ್ದರು, ಇಲ್ಲಿಂದಲೇ ನಮಸ್ಕಾರ ಮಾಡಿ ಶುಭ ಕೋರಿದರು. ಇಂದು ಕೂಡ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಲ್ಲವೂ ಸಹಜವಾಗಿದೆ ಎಂದು ತಿಳಿದುಬಂದಿದೆ. ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ಅವರದ್ದೇ ಆದ ಶಕ್ತಿ ಇದೆ, ಅದರಿಂದ ಅವರು ಜಯಶಾಲಿಯಾಗಿ ಹೊರಬರಲಿದ್ದರೆ. ದೀರ್ಘಕಾಲ ನಮ್ಮ ಜೊತೆ ಇದ್ದು ನಮಗೆ ಆಶೀರ್ವಾದ ಮಾರ್ಗದರ್ಶನ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಮತ್ತೊಮ್ಮೆ ಬಿಜೆಪಿಗೆ ಅಧಿಕಾರ: ನಾನು ದೇವರ ಬಳಿ ಚುನಾವಣೆ ಗೆಲ್ಲುವ ಬಗ್ಗೆ ಬೇಡಿಕೊಳ್ಳಲ್ಲ. ಜನರೇ ದೇವರು, ಎಲ್ಲರ ಮನಸ್ಸಿನಲ್ಲಿ ಏನಿದೆಯೋ ಅದೇ ಆಗಲಿದೆ. ನಾನು ಮಾಡಿರುವ ಕೆಲಸ, ನಾನು ಕೊಟ್ಟಿರುವ ಆಡಳಿತದಿಂದ ನನಗೆ ವಿಶ್ವಾಸವಿದೆ. ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಮುನಿರತ್ನ ಇದ್ದರು.