ಬೆಂಗಳೂರು: ಇಲ್ಲಿನ ಕಾಚರಕನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಧನ್ವಂತರಿ ಮಹಾಯಜ್ಞದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು. ನಂತರ ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಹೆಚ್ಎಎಲ್ನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಕಾಕತಾಳೀಯ ಎಂಬಂತೆ ಅಲ್ಲಿ ವಿಜ್ಞಾನ ಇಲ್ಲಿ ಅಧ್ಯಾತ್ಮಿಕತೆ. ವಿಜ್ಞಾನ ಮತ್ತು ಅಧ್ಯಾತ್ಮಿಕತೆ ಒಂದೇ ನಾಣ್ಯದ ಎರಡು ಭಾಗ. ವಿಜ್ಞಾನದಿಂದ ಆಧ್ಯಾತ್ಮಿಕಕ್ಕೆದಾರಿ. ಅಧ್ಯಾತ್ಮಿಕತೆಯಿಂದ ವಿಜ್ಞಾನಕ್ಕೆ ಸ್ಪೂರ್ತಿ. ಇದು ಸದಾ ಕಾಲನಡೆಯುತ್ತಾ ಬಂದಿದೆ ಎಂದರು.
ಎಲ್ಲ ವಿಜ್ಞಾನಿಗಳು ಧರ್ಮದಲ್ಲಿ ನಂಬಿದವರು, ವಿದ್ಯೆಯಲ್ಲಿ ನಂಬಿದವರು, ಅಧ್ಯಾತ್ಮಕತೆಯಲ್ಲಿ ನಂಬಿದವರಿದ್ದಾರೆ. ಅಲ್ಬರ್ಟ್ ಐನ್‍ಸ್ಟೈನ್ ನಿಂದ ಹಿಡಿದು ಎಲ್ಲರೂ ಕೂಡ ಧಾರ್ಮಿಕ ವಿಧಿವಿಧಾನ, ಧಾರ್ಮಿಕ ವಿಷಯದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟು, ಮಾನವ ಕಲ್ಯಾಣವನ್ನು ಮಾಡಿದ್ದಾರೆ. ಹಾಗಾಗಿ ವಿಜ್ಞಾನ ಹಾಗೂ ಅಧ್ಯಾತ್ಮ ಎರಡೂ ಮುಖ್ಯವಾಗಿದೆ.
ಅಧ್ಯಾತ್ಮ ಆತ್ಮಸ್ತೈರ್ಯ, ಪ್ರೇರಣೆ, ಸ್ಫೂರ್ತಿ ಕೊಡುವಂಥ ಕೆಲಸ ಆದರೆ ಆ ಸ್ಫೂರ್ತಿಯಿಂದ ಜ್ಞಾನದ ಬಲದಿಂದ ಹತ್ತು ಹಲವು ಆವಿಷ್ಕಾರಗಳಾದರೆ ಆರೋಗ್ಯದಲ್ಲಿ ರಕ್ಷಾ ಕವಚ ಕೊಡುವ ಕೆಲಸ ವಿಜ್ಞಾನ ಮಾಡುತ್ತಿದೆ. ತತ್ವಜ್ಞಾನ ಹಾಗೂ ವಿಜ್ಞಾನದ ಸಂಗಮವೇ ಈ ಧನ್ವಂತರಿ ಯಜ್ಞ ಆಗಿದೆ ಎಂದು ತಿಳಿಸಿದರು.
ಆರೋಗ್ಯ ಇದ್ದರೆ ಎಲ್ಲವೂ ಇದೆ, ಆರೋಗ್ಯ ಇದ್ದರೆ ಆತ್ಮಸ್ತೈರ್ಯ ಇದೆ. ಗುರಿ ಇದೆ, ಮುಂದಿನ ದಾರಿ ಇದೆ. ರೋಗ ನಿರೋಧಕವಾಗಿರುವಂಥ ಧನ್ವಂತರಿ ತಾಯಿಯನ್ನು ಪೂಜೆ ಮಾಡಿ. ಧನ್ವಂತರಿ ಗುಣಗಳಿರುವಂಥ ಎಲ್ಲವನ್ನೂ ಹೋಮದಲ್ಲಿ ಮಾಡಿ ಆ ಮೂಲಕ ಶಕ್ತಿ ಪಡೆಯಬೇಕು. ನಮಗೆ ಬರುವಂಥ ಎಲ್ಲಾ ಆತಂಕ, ಆರೋಗ್ಯ ಸವಾಲುಗಳನ್ನು ಆ ಮೂಲಕ ಎದುರಿಸಬೇಕು ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ : ಹಾವೇರಿಯಲ್ಲಿ ನವರಾತ್ರಿ ವೈಭವ..ಒಂಬತ್ತು ದಿನಗಳಲ್ಲಿಯೂ ವಿಶೇಷಾಲಂಕಾರ