ಬೆಂಗಳೂರು: ಮನೆಯಲ್ಲಿ ಹೆಂಡತಿ ಜೊತೆ ಜಗಳ ಮಾಡುವುದು ಜೀವನದ ಭಾಗ. ಜಗಳ ಇದ್ದರೇನೆ ಆ ಸಂಸಾರದಲ್ಲಿ ಪ್ರೀತಿ, ನೆಮ್ಮದಿ, ಸೃಜನಶೀಲತೆ ಇರುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸ್ವರ ಪ್ರಿಂಟ್ ಆ್ಯಂಡ್ ಪಬ್ಲಿಕೇಷನ್ಸ್ ಹೊರತಂದಿರುವ ಪತ್ರಕರ್ತ ಶಂಕರ ಪಾಗೋಜಿ ಬರೆದಿರುವ ಅಂಕಣಗಳ ರಾಜಕೀಯ ಸಂಸಾರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ ದಿನ ಹೆಂಡತಿಯೊಂದಿಗಿನ ಜಗಳ ಪ್ರೀತಿಯನ್ನು ಹೆಚ್ಚಿಸುತ್ತದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿನಂತೆ ಸಂಸಾರದಲ್ಲಿ ಯಾವಾಗಲೂ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಶಂಕರ ಪಾಗೋಜಿಯವರ ರಾಜಕೀಯ ಸಂಸಾರ ಪ್ರತಿಯೊಬ್ಬರ ಮನೆಯಲ್ಲಿ ನಡೆಯುತ್ತದೆ. ಮನೆಯ ವಿಷಯವನ್ನು ಇಟ್ಟುಕೊಂಡು ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಹೋಲಿಕೆ ಮಾಡಿ ಬರೆಯುವ ಸೂಕ್ಷ್ಮ ಸಂವೇದನೆ ಎಲ್ಲರಿಗೂ ಬರುವುದಿಲ್ಲ. ಉತ್ತರ ಕರ್ನಾಟಕದ ಭಾಷೆಯಲ್ಲಿ ಹಾಸ್ಯದ ಮೂಲಕವೇ ಗಂಭೀರ ವಿಷಯವನ್ನು ಯಾರಿಗೂ ನೋವಾಗದಂತೆ ಹೇಳುವುದು ಒಂದು ಕಲೆ. ಉತ್ತರ ಕರ್ನಾಟಕ ಭಾಷೆ ಒಂದು ಪದದಲ್ಲಿ ಎಲ್ಲಾ ಅರ್ಥವನ್ನು ಹೇಳುತ್ತದೆ. ಪತ್ರಕರ್ತರು ನಿರಂತರವಾಗಿ ಗಂಭೀರವಾಗಿ ರಾಜಕೀಯ ವಿಷಯವನ್ನು ಬರೆಯುವುದು ಕಡಿಮೆ. ಶಂಕರ ಪಾಗೋಜಿ ತಮ್ಮ ನಿತ್ಯದ ಕೆಲಸದ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬರೆಯುತ್ತಿರುವುದು ಸಂತಸದ ವಿಷಯ. ಅವರ ಬರವಣಿಗೆ ಇನ್ನಷ್ಟು ಮೊನಚಾಗಿ ಬರಲಿ ಎಂದು ಹೇಳಿದರು.