ಬೆಂಗಳೂರು: ಮಾಗಡಿಯ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಮನಗರ ಪೊಲೀಸರು ಸ್ವಾಮೀಜಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ ಯುವತಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆಯ ಹಿಂದೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗಿದ್ದು ಈ ಆಯಾಮದಲ್ಲಿಯೂ ತನಿಖೆ ಪ್ರಗತಿಯಲ್ಲಿದೆ.
ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಕೆಲವು ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ಮುಖ್ಯವಾಗಿ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್ ನೋಟ್ ಸಿಕ್ಕಿದೆ. ಇದರೊಂದಿಗೆ ಕೆಲವು ಸಾಕ್ಷ್ಯಾಧಾರಗಳೂ ಲಭ್ಯವಾಗಿವೆ ಎಂದರು.
ಸಾವಿಗೂ ಮುನ್ನ ಶ್ರೀಗಳ ಜೊತೆ ಯಾರೆಲ್ಲ ಫೋನ್ ಕರೆಯಲ್ಲಿ ಮಾತನಾಡಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಡೆತ್ ನೋಟ್ ತನಿಖೆಯ ಒಂದು ಭಾಗವಾಗಿದ್ದು ಸಾಂದರ್ಭಿಕ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಯುತ್ತಿದೆ. ತನಿಖಾ ಹಂತದಲ್ಲಿ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ.
ಸ್ವಾಮೀಜಿಯವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ಮೇಲ್ನೋಟಕ್ಕೆ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಹೇಳಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಐಜಿಪಿ ಚಂದ್ರಶೇಖರ್ ವಿವರಿಸಿದರು.
ಇದನ್ನೂ ಓದಿ: ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು