ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ಹೊರಹಾಕುವುದರ ಜೊತೆಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಳೆಯ ನೆನಪುಗಳನ್ನು ಮೆಲುಕುಹಾಕಿದರು. ''ನಿಮ್ಮನ್ನು (ಸ್ಪೀಕರ್) ಹಾಗೂ ನನ್ನನ್ನು ಸಚಿವರನ್ನಾಗಿ ಮಾಡಬೇಕಿತ್ತು. ಆದರೆ, ಯಡಿಯೂರಪ್ಪನವರು ಮಾಡಲಿಲ್ಲ'' ಎಂದರು.
15ನೇ ವಿಧಾನಸಭೆ ಕೊನೆಯ ದಿನವಾದ ಇಂದು ಮಾತನಾಡಿದ ಅವರು, ''ನಾನು ಸಚಿವನಾದ್ರೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಸಚಿವರನ್ನಾಗಿ ಮಾಡಲಿಲ್ಲ. ಏನೇ ಇರಲಿ ಯಡಿಯೂರಪ್ಪ ನಮ್ಮ ನಾಯಕ'' ಎಂದು ಹೇಳಿದರು. ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ''ನಿಮ್ಮನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದರು. ನನ್ನನ್ನು ರಾಜ್ಯ ಶಿಕ್ಷಣ ಸಚಿವರನ್ನಾಗಿ ಮಾಡಿದ್ದರು'' ಎಂದರು.
ಮತ್ತೆ ಮಾತು ಮುಂದುವರಿಸಿದ ಯತ್ನಾಳ್, ''ಪಕ್ಷವನ್ನು ಕಟ್ಟಿದ ಶ್ರೇಯ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಪಕ್ಷ ಇಂದು ಈ ಸ್ಥಾನದಲ್ಲಿ ಇರಲು ಅವರೇ ಕಾರಣ. ನಾನು ಆಡಳಿತ ಪಕ್ಷದ ಶಾಸಕನಾದ್ರೂ ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡಿದ್ದೇನೆ'' ಎಂದು ಹೇಳಿದರು.
ರಾಜಕೀಯ ನೆನಪುಗಳ ಮೆಲುಕು: ''ನಾನು ಅಂತರಾಳದಿಂದ ಮಾತನಾಡುತ್ತೇನೆ. ನಾವು, ನೀವು, ಆರಗ ಜ್ಞಾನೇಂದ್ರ ಎಲ್ಲರೂ 94ರ ಬ್ಯಾಚ್ನವರು. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ವಾಟಾಳ್ ನಾಗರಾಜ್ ಎಲ್ಲಾ ದೊಡ್ಡವರಿದ್ರು. ಮಾಧುಸ್ವಾಮಿ ಅವರು ಉಪ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ನಾವೆಲ್ಲಾ ಲಾಸ್ಟ್ ಬೇಂಚ್ನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಯಡಿಯೂರಪ್ಪ ನಮ್ಮನ್ನೆಲ್ಲಾ ಲೀಡ್ ಮಾಡ್ತಿದ್ರು. ಸುಮ್ಮನೆ ಕೂತ್‌ಗೊಳ್ರಯ್ಯ ಅಂತ ಗದರಿಸ್ತಿದ್ರು ಎಂದು ನೆನಪಿಸಿದರು.
''ತಾವು ಸ್ಪೀಕರ್ ಆದಾಗ ವಿಪಕ್ಷಕ್ಕೆ ಹೆಚ್ಚು ಮಾತನಾಡಲು ಅವಕಾಶ ಕೊಟ್ಟಿದ್ದೀರಿ. ನಮಗೂ ಕೊಟ್ಟಿದ್ದೀರಿ. ನನ್ನ ಜನ ಎರಡು ಬಾರಿ ಲೋಕಸಭೆ, ಒಂದು ಬಾರಿ ಸ್ವತಂತ್ರ, ಎರಡು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ಅಭಿವೃದ್ಧಿಗೆ ಅನ್ಯಾಯ ಆದಾಗ ಧ್ವನಿ ಎತ್ತಿದ್ದೇನೆ. ಇಲ್ಲಿಯೂ ಅನ್ಯಾಯ ಆದಾಗ ಮಾತನಾಡಲು ಅವಕಾಶ ನೀಡಿದ್ದೀರಾ'' ಎಂದು ಸ್ಪೀಕರ್ಗೆ ಧನ್ಯವಾದ ಸಲ್ಲಿಸಿದರು.
ಯಡಿಯೂರಪ್ಪ ನಮ್ಮ ನಾಯಕ: ''ಯಡಿಯೂರಪ್ಪ ಅವರು ನಮ್ಮ ನಾಯಕರು, ನಮ್ಮ ನಡುವೆ ಏನೇ ವೈಷಮ್ಯ ಇರಬಹುದು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ, ಅನಂತ್ ಕುಮಾರ್, ಇಬ್ಬರೂ ಕೃಷ್ಣ, ಅರ್ಜುನ ರೀತಿ ಇದ್ದರು. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡಿದರು.
''ಯಡಿಯೂರಪ್ಪ ಅವರು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಹಿರಿಯ ಸಚಿವರು ಇನ್ನು ಮುಂದೆ ನಮ್ಮ ಮಗನನ್ನು ನಿಲ್ಲಿಸುತ್ತೇವೆಂದು ಹೇಳಿದರು. ಆದರೆ, ನಿನ್ನೆ ಅವರ ಬಳಿ ಹೋಗಿ ಕುಳಿತುಕೊಂಡು ಮಾತನಾಡಿದೆ, ಇಲ್ಲ ಜನ ಬಿಡುತ್ತಿಲ್ಲ, ನಾನೇ ಚುನಾವಣಗೆ ನಿಲ್ಲುತ್ತೇನೆ ಎಂದು ಹೇಳಿದ್ರು. ಸಾಯುವಾಗ ಶಾಸಕರಾಗಿ ಸಾಯಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ'' ಎಂದು ಹೆಸರು ಹೇಳದೇ ಕಾಲೆಳೆದರು.
ಇದನ್ನೂ ಓದಿ: 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ.ಎಸ್.ಯಡಿಯೂರಪ್ಪ