ಬೆಂಗಳೂರು : ಸಿಎಂ ಹಾಗೂ ಸಿಎಂ ಪುತ್ರನ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೇ ಮಠಾಧೀಶರು ಸಿಎಂ ಕುಟುಂಬ ಪರ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಫೇಸ್ಬುಕ್ ಪೋಸ್ಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ರಾಜ್ಯದ ವೀರಶೈವ - ಲಿಂಗಾಯತ ಮಠ-ಮಾನ್ಯಗಳ ಮಠಾಧೀಶರು ಹಾಗೂ ಸ್ವಾಮೀಜಿಗಳಿಗೆ ಯಡಿಯೂರಪ್ಪನವರ ಸುಪುತ್ರ ವಿಜಯೇಂದ್ರನಿಗೆ ತಮ್ಮ ತಂದೆಯ ಸ್ಥಾನ ಪತನದ ಮುನ್ಸೂಚನೆ ಸಿಕ್ಕಿದೆ.
ಈ ಹಿನ್ನೆಲೆ ಇದರಿಂದ ಇಡೀ ವೀರಶೈವ-ಲಿಂಗಾಯತ ಸಮಾಜಕ್ಕೆ ಅವಮಾನವಾಗುತ್ತದೆ ಮತ್ತು ಕಡೆಗಣಿಸಿಂತಾಗುತ್ತದೆ ಎಂದು ಬಿಂಬಿಸುತ್ತಿದ್ದಾರೆ.
ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತದೆ ಹಾಗೂ ಪಕ್ಷವೇ ಕರ್ನಾಟಕದಲ್ಲಿ ನಾಶವಾಗುತ್ತದೆ ಎಂಬ ಇತ್ಯಾದಿ ಬೆದರಿಕೆಯನ್ನು ಮಠಾಧೀಶರು, ಸ್ವಾಮೀಜಿಗಳಿಂದ ಹೇಳಿಕೆ ನೀಡಲು ಒತ್ತಡ ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಸರಿ ಎಂಬಂತೆ ಎಲ್ಲರ ಸಂಪರ್ಕ ಮಾಡತೊಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ಯಾರೊಬ್ಬ ಪೂಜ್ಯರು ಸಹ ಇಂತಹ ಸಮಾಜ ಕಳಂಕಿತರ ಪರವಾಗಿ ವಿಶ್ವ ಗುರು ಬಸವಣ್ಣನವರ ತತ್ವಕ್ಕೆ ವಿರುದ್ಧವಾದ ನಿಲುವು ತಳೆಯುವುದಿಲ್ಲ ಎಂಬುದು ನಮ್ಮ ನಂಬಿಕೆ. ಭ್ರಷ್ಟಾಚಾರದಿಂದ ಇಡೀ ಕುಟುಂಬ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ.
ಇಂತಹ ಕುಟುಂಬದಿಂದ ನಮ್ಮ ರಾಜ್ಯವನ್ನು ಮುಕ್ತಗೊಳಿಸಲು ಯಾರೂ ಆಮಿಷಕ್ಕೆ ಒಳಗಾಗದೇ ಇವರ ಪರ ಹೇಳಿಕೆಯಾಗಲೀ ಅಥವಾ ಇವರ ಪರ ಲಾಬಿ ಮಾಡಬಾರದೆಂದು ಕಳಕಳಿಯ ವಿನಂತಿ ಎಂದು ಕೋರಿದ್ದಾರೆ.
ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಏನು ಬೇಕಾದರೂ ಖರೀದಿಸಬಹುದು ಎಂಬ ಸೊಕ್ಕಿನಿಂದ ಇಂದು ಎಲ್ಲರನ್ನೂ ಅಂದರೆ ಮಠಾಧೀಶರನ್ನು, ಮಾಧ್ಯಮಗಳನ್ನು, ವೀರೋಧ ಪಕ್ಷಗಳನ್ನು ಖರೀದಿ ಮಾಡುವ ಅಹಂಕಾರ ಮತ್ತು ಹಣದ ಪಿತ್ತ ನೆತ್ತಿಗೆ ಏರಿದೆ.
ತಮ್ಮ ಪರ ನಿಲುವು ತಳೆಯಲು ಒತ್ತಾಯಿಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಪಕ್ಷದ ಕೇಂದ್ರದ ನಾಯಕರುಗಳನ್ನು ಕೆಟ್ಟ ಶಬ್ದಗಳಲ್ಲಿ ಟೀಕಿಸಲು ತಮ್ಮದೇ ಆದ ಖಾಸಗಿ ಜಾಲತಾಣ ಮೂಲಕ ಪ್ರೇರೇಪಿಸುತ್ತಿರುವುದು, ನಮ್ಮ ವೀರಶೈವ- ಲಿಂಗಾಯತ ಸಮಾಜ ಎಂದಿಗೂ ಸಹಿಸಲ್ಲ ಎಂದಿದ್ದಾರೆ.
ಈ ರೀತಿ ಇವರ ಪರ ಹೋದರೆ ಸಮಾಜ ತಲೆತಗ್ಗಿಸಿ, ಭ್ರಷ್ಟ ಸಮಾಜವನಿಸುತ್ತದೆ. ಅಕಸ್ಮಾತ್ ಇಂತಹ ದುರುಳರ, ಭ್ರಷ್ಟರ ಪರವಾಗಿ ಯಾರಾದರೂ ಹೇಳಿಕೆ ನೀಡಿದರೆ ಅದು ನಮ್ಮ ವೀರಶೈವ-ಲಿಂಗಾಯತರ ಅಧ:ಪತನವಾದಂತೆ ಸರಿ. ಎಂದಿಗೂ ಸಮಾಜ ಸಮಾಜಮುಖಿಯಾಗಿರಬೇಕು ಹೊರತು ಹಣದ ಆಮಿಷಕ್ಕೊಳಗಾಗಬಾರದು. ಇದು ನಮ್ಮಪಂಚ ಪೀಠ, ಬಸವಾದಿ ಪ್ರಮಥರ ತತ್ತ್ವಕ್ಕೆ ವಿರೋಧ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಏಳು ವರ್ಷ: ಸಿಎಂ ಸೇರಿ ಬಿಜೆಪಿ ನಾಯಕರಿಂದ ರಾಜ್ಯಾದ್ಯಂತ ಸೇವಾ ಕಾರ್ಯಕ್ರಮ