ಬೆಂಗಳೂರು: ಜಯದೇವ ಫ್ಲೈ ಓವರ್ ಜಂಕ್ಷನ್ ಹತ್ತಿರ 2ನೇ ಹಂತದ ಮೆಟ್ರೊ ರೀಚ್-5 ಮಾರ್ಗದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ಜುಲೈ 15 ರಿಂದ ಬನ್ನೇರುಘಟ್ಟ ಕಡೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸುವ ಫ್ಲೈ ಓವರ್ ಅನ್ನು ಬಂದ್ ಮಾಡಲಾಗಿದೆ.
ಅದಲ್ಲದೆ, ಈ ಮಾರ್ಗದಲ್ಲಿ ಸರ್ವಿಸ್ ರಸ್ತೆಯನ್ನು ಸಹ ಬಂದ್ ಮಾಡಲಾಗುತ್ತಿದೆ. ಸ್ಥಳೀಯರಿಗೆ ಮಾತ್ರ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಹೀಗಾಗಿ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಅಂತ ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಚಾರಿ ಪೊಲೀಸರ ಅನುಮತಿ ಮೇರೆಗೆ ಬದಲಾವಣೆ ಮಾರ್ಗಗಳು ಕೆಳಕಂಡಂತಿವೆ:
ಬನ್ನೇರುಘಟ್ಟ ಕಡೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ತಲುಪಲು - ಜೆ.ಡಿ ಮರ ಜಂಕ್ಷನ್ ಅಥವಾ 9ನೇ ಅಡ್ಡರಸ್ತೆಯಲ್ಲಿ ಎಡಕ್ಕೆ ತಿರುಗಿ, ಈಸ್ಟ್ ಎಂಡ್ ಮುಖ್ಯರಸ್ತೆ ತಲುಪಿ ನಂತರ ಮಾರೇನಹಳ್ಳಿ ಮುಖ್ಯ ರಸ್ತೆ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪಬಹುದು.
ಬನ್ನೇರುಘಟ್ಟ ರಸ್ತೆಯಿಂದ 6ನೇ ಅಡ್ಡರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ 29ನೇ ಮುಖ್ಯ ರಸ್ತೆ ಮೂಲಕ ಹಾದು, 6ನೇ ಮುಖ್ಯರಸ್ತೆ ಎಡಕ್ಕೆ ತಿರುಗಿ, ಮಾರೇನಹಳ್ಳಿ ಮುಖ್ಯರಸ್ತೆ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪಬಹುದು.
ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಬನ್ನೇರುಘಟ್ಟ ರಸ್ತೆಗೆ ತಲುಪಲು ಮಾರೇನಹಳ್ಳಿ ಮುಖ್ಯ ರಸ್ತೆಯಿಂದ 29 ನೇ ಮುಖ್ಯ ರಸ್ತೆ ಎಡಕ್ಕೆ ತಿರುಗಿ, 7ನೇ ಅಡ್ಡರಸ್ತೆಯಿಂದ ಬನ್ನೇರುಘಟ್ಟ ರಸ್ತೆ ತಲುಪಬಹುದು.
ಜಯದೇವ ಅಂಡರ್ ಪಾಸ್ನ ಎರಡೂ ಬದಿಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬನಶಂಕರಿಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ಇರುವ ಜಯದೇವ ಫ್ಲೈ ಓವರ್‌ನ ಸಂಚಾರದಲ್ಲೂ ಕೂಡ ಯಾವುದೇ ಬದಲಾವಣೆ ಇರುವುದಿಲ್ಲ.