ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದಿಂದ ಐದು ಪ್ರದೇಶಗಳನ್ನು ಕೈಬಿಟ್ಟಿರುವ ಕುರಿತು ಸೂಕ್ತ ವಿವರಣೆ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ವಿಜ್ಞಾನಿ ಮುಂದಿನ ವಿಚಾರಣೆ ವೇಳೆ ನೇರವಾಗಿ ಹಾಜರಿರಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಉದ್ಯಾನವನ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು ಕಡಿತಗೊಳಿಸಿ 2018ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬನ್ನೇರುಘಟ್ಟ ಪ್ರಕೃತಿ ಸಂರಕ್ಷಣಾ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ವಿಜ್ಞಾನಿಯೊಬ್ಬರು ಪರಿಸರ ಸೂಕ್ಷ್ಮ ವಲಯದ ನಕ್ಷೆ ಜೊತೆಗೆ ಸಿದ್ಧಪಡಿಸಿದ್ದ ಪ್ರಮಾಣಪತ್ರವನ್ನು ಕೇಂದ್ರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಪೀಠ, ವಿಜ್ಞಾನಿಯು ಪರಿಸರ ಸೂಕ್ಷ್ಮ ವಲಯದಿಂದ ಕೆಲವು ಪ್ರದೇಶಗಳನ್ನು ಕೈಬಿಟ್ಟಿರುವುದು ಉದ್ಯಾನವನದ ಜೀವಸಂಕುಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸದರ್ನ್ ಬರ್ಡ್ ವಿಂಗ್' ಚಿಟ್ಟೆ ಅಭಿವೃದ್ಧಿ
ಆದರೆ, ಪ್ರಮಾಣಪತ್ರ ನ್ಯಾಯಾಲಯಕ್ಕೆ ಸಮಾಧಾನಕರವಾಗಿಲ್ಲ. ಹೀಗಾಗಿ ಪ್ರಮಾಣಪತ್ರ ಸಿದ್ಧಪಡಿಸಿದ ವಿಜ್ಞಾನಿ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿದ್ದು, ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯನ್ನು ಕಡಿತ ಮಾಡಿರುವ ಬಗ್ಗೆ ಹಾಗೂ ಈ ವ್ಯಾಪ್ತಿಯಲ್ಲಿದ್ದ ಐದು ಸಣ್ಣ ಪ್ರದೇಶಗಳನ್ನು ಕೈಬಿಟ್ಟಿರುವುದು ಏಕೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದಿಂದ 5 ಸಣ್ಣ ಪ್ರದೇಶಗಳನ್ನು ಕೈ ಬಿಟ್ಟಿರುವುದಕ್ಕೆ ಸಕಾರಣಗಳನ್ನು ನೀಡುವಂತೆ ಸೂಚಿಸಿತ್ತು. 5 ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಟ್ಟಿದ್ದು ಏಕೆ? ಇದರಿಂದ ರಾಷ್ಟ್ರೀಯ ಉದ್ಯಾನವನದ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಕುರಿತು ತಜ್ಞರ ವರದಿ ಸಲ್ಲಿಸುವಂತೆ ಸೂಚಿಸಿತ್ತು.