ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಸೌಹಾರ್ದ ಬ್ಯಾಂಕ್ನ ಕರ್ಮಕಾಂಡ ಬಯಲಾಗಿದೆ. ಠೇವಣಿದಾರರ ಹಣವನ್ನ ದುರ್ಬಳಕೆ ಮಾಡಿಕೊಂಡು, ಕುರುಹಿನಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ನಲ್ಲಿದ್ದ ಕೋಟ್ಯಂತರ ರೂಪಾಯಿ ಹಣ ಸಾಲ ನೀಡಿ ಆರ್ಥಿಕ ದಿವಾಳಿಗೆ ನೂಕಿ ಅಕ್ರಮವೆಸಗಿದ್ದ ಆರೋಪದಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಈಶ್ವರಪ್ಪ, ಸಾಲಗಾರರಾದ ದಯಾನಂದ್, ಚಂದ್ರಶೇಖರ್ ಹಾಗೂ ಸುರಬಿ ಚಿಟ್ಸ್ ಮಾಲೀಕ ಬಿ.ಟಿ.ಮೋಹನ್ ಎಂಬುವರನ್ನು ಬಂಧಿಸಲಾಗಿದೆ. ಕೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುರುಹಿನ ಶೆಟ್ಟಿ ಬ್ಯಾಂಕ್ನಲ್ಲಿ 2011 ರಿಂದ 22ರವರೆಗೆ ಶ್ರೀನಿವಾಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನೂರಾರು ಗ್ರಾಹಕರ ಠೇವಣಿ ರೂಪದಲ್ಲಿ ಬಂದಿದ್ದ ಕೋಟ್ಯಂತರ ರೂಪಾಯಿ ಹಣವನ್ನ ಸಾಲ ಮಂಜೂರಾತಿ ಸಮಿತಿ ಅಧಿಕಾರಿಗಳ ಮುಖಾಂತರ ದಾಖಲಾತಿ ಪರಿಶೀಲಿಸದೆ ಸಾಲ ಮಂಜೂರು ಮಾಡಿಸಿದ್ದರು.
ನೋಟು ಅಮಾನ್ಯೀಕರಣ ಹಾಗೂ ಕೊರೊನಾ ನೆಪ ಹೇಳಿ ಹಲವು ವರ್ಷಗಳಿಂದ ಸಾಲಗಾರರು ಸಹ ಲೋನ್ ಕಟ್ಟಿರಲಿಲ್ಲ. ಸ್ವತ್ತುಗಳ ಮೇಲೆ ನಿಗದಿಗಿಂತ ಹೆಚ್ಚ ಸಾಲ ನೀಡುವುದರ ಜೊತೆಗೆ ಬೆಂಗಳೂರಿನಲ್ಲಿ 10 ಶಾಖಾ ಕಚೇರಿ ಹೊಂದಿರುವ ಸುರಭಿ ಚಿಟ್ಸ್ ಲಿಮಿಟೆಡ್ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅನರ್ಹರಿಗೆ ಕೋಟಿಗಟ್ಟಲೇ ಸಾಲ ನೀಡಿದ್ದರು. ಕಾಲಕ್ರಮೇಣ ಠೇವಣಿಯ ರೂಪದಲ್ಲಿ ಸುಮಾರು 90 ಕೋಟಿ ಪೈಕಿ 78 ಕೋಟಿ ಹಣ ದುಬರ್ಳಕೆ ಮಾಡಿಕೊಂಡಿದ್ದರು.
ಗ್ರಾಹಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಐವರು ವಂಚಕರನ್ನು ಸೆರೆಹಿಡಿದ್ದಾರೆ. ವಂಚಕ ಶ್ರೀನಿವಾಸ್ ಅಧ್ಯಕ್ಷ ಅವಧಿಯಲ್ಲಿ ಸಿಇಒ, ಸಾಲ ಮಂಜೂರಾತಿ ಸಮಿತಿಯಲ್ಲಿ ಅಧಿಕಾರಿಗಳು ಅಕ್ರಮ ಕೂಟದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಸದ್ಯ ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಕೋಲಾದಲ್ಲಿ ಸಿನಿಮಾ ಶೂಟಿಂಗ್ ಮಾಡ್ತಿದ್ದವರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಅಸ್ವಸ್ಥ