ಬೆಂಗಳೂರು: ಸಿಸಿಬಿ ತೆಕ್ಕೆಯಲ್ಲಿ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಪ್ರಮುಖ ಕೇಸ್ಗಳಿವೆ. ಆದರೆ ಕೇಸ್ಗಳ ಸಂಖ್ಯೆ ಹೆಚ್ಚಾಗಿದ್ದು, ಅಧಿಕಾರಿಗಳ ಸಂಖ್ಯೆ ಮಾತ್ರ ಕಡಿಮೆಯಿದೆ. ಎಸಿಪಿ, ಇನ್ಸ್ಪೆಕ್ಟರ್ ಸೇರಿ ಕೇವಲ 15 ರಿಂದ 20 ಮಂದಿ ಅಧಿಕಾರಿಗಳಷ್ಟೇ ಸಿಸಿಬಿಯಲ್ಲಿದ್ದಾರೆ.
ಸದ್ಯ ಬಹುತೇಕ ಪ್ರಮುಖ ಪ್ರಕರಣಗಳಿರುವ ಕಾರಣ ತನಿಖೆ ನಡೆಸಲು ಅಧಿಕಾರಿಗಳಿಗೆ ಒತ್ತಡಗಳಿವೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಪ್ರಮುಖ ಪ್ರಕರಣಗಳು:
ಭೂಗತ ಪಾತಕಿ ರವಿ ಪೂಜಾರಿ ಪ್ರಕರಣ, ಉಗ್ರ ಶೋಯೆಬ್ ಕೇಸ್, ಡ್ರಗ್ಸ್ ಪ್ರಕರಣ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ, ಬೆಂಗಳೂರು ಗಲಭೆ ಪ್ರಕರಣ (ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಬೆಂಕಿ ಹಚ್ಚಿದ ಪ್ರಕರಣ), ಡ್ರಗ್ಸ್ ಪೆಡ್ಲರ್ ಪ್ರಕರಣ ಹಾಗೂ ನಗರದಲ್ಲಿ ನಡೆಯುವ ಅಂದರ್ ಬಾಹರ್, ವೇಶ್ಯಾವಾಟಿಕೆ ದಂಧೆ ಹೀಗೆ ಹಲವಾರು ಪ್ರಕರಣಗಳು ಸಿಸಿಬಿ ತೆಕ್ಕೆಯಲ್ಲಿವೆ. ಹಾಗಾಗಿ ತನಿಖಾಧಿಕಾರಿಗಳು ವಾರದ ರಜೆ ಎಲ್ಲಾ ಮರೆತು ಬಹಳ ಒತ್ತಡದಿಂದ ಕೆಲಸ ನಿರ್ವಹಿಸವೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗ್ತಿದೆ.
ಎಲ್ಲಾ ಪ್ರಕರಣಗಳ ತನಿಖೆ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ. ಅಲ್ಲದೇ ಯಾವುದೇ ಪ್ರಕರಣ ಕೈಗೆತ್ತಿಕೊಂಡರು ನ್ಯಾಯಾಲಯಕ್ಕೆ ಹೋಗಲೂ ಸಹ ಅಧಿಕಾರಿಗಳ ಕೊರತೆ ಇದೆ. ಪ್ರಕರಣದ ಯಾವುದೇ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದರೆ ತನಿಖಾಧಿಕಾರಗಳ ಪರವಾಗಿ ಒಬ್ಬರಾದರೂ ಕೋರ್ಟ್ಗೆ ಹಾಜರಾಗಬೇಕು. ಅದಕ್ಕೂ ಸಿಸಿಬಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಕೇಸ್ಗಳನ್ನ ನಡೆಸಲು ಅಧಿಕಾರಿಗಳು ಕಷ್ಟ ಪಡುತ್ತಿದ್ದಾರೆ. ಇದರ ಬಗ್ಗೆ ಗೃಹ ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.