ಬೆಂಗಳೂರು : ಹಳೇ ಸ್ನೇಹಿತರಿಬ್ಬರ ನಡುವೆ ಆರಂಭವಾದ ಗಲಾಟೆ ಚಾಕು ಇರಿತದಿಂದ ಕೊಲೆಯಲ್ಲಿ ಅಂತ್ಯವಾದ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ನಡೆದಿದೆ. ಮೃತ ಯುವಕನನ್ನು ಇರ್ಫಾನ್ ಎಂದು ಗುರುತಿಸಲಾಗಿದ್ದು, ಆರೋಪಿ ಖಾಸಿಂನನ್ನು ಪೊಲೀಸರು ಬಂಧಿಸಿದ್ದಾರೆ.
ಇರ್ಫಾನ್ ಹಾಗೂ ಖಾಸಿಂ ಇಬ್ಬರು ಸ್ನೇಹಿತರಾಗಿದ್ದು, ಈ ಹಿಂದೆ ಪರಸ್ಪರ ಭಿನ್ನಾಭಿಪ್ರಾಯದಿಂದ ವೈರಿಗಳಾಗಿದ್ದರು. ಶುಕ್ರವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಇರ್ಫಾನ್ ತನ್ನ ಸ್ನೇಹಿತರ ಜೊತೆಗಿದ್ದಾಗ ಆರೋಪಿ ಖಾಸಿಂ ಆನೆಪಾಳ್ಯಕ್ಕೆ ಬಂದಿದ್ದ. ಈ ವೇಳೆ 'ನಮ್ಮ ಏರಿಯಾಗೆ ಯಾಕೆ ಬಂದೆ?' ಎಂದು ಇರ್ಫಾನ್ ಗಲಾಟೆ ಆರಂಭಿಸಿದ್ದ. ಪರಸ್ಪರ ಜಗಳ ತಾರಕಕ್ಕೇರಿದಾಗ ಇರ್ಫಾನ್ ತನ್ನ ಬಳಿಯಿದ್ದ ಚಾಕುವಿನಿಂದ ಖಾಸಿಂನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ ಚಾಕು ಕಿತ್ತುಕೊಂಡ ಖಾಸಿಂ, ಇರ್ಫಾನ್ ನ ಬಲತೊಡೆಗೆ ಬಲವಾಗಿ ಇರಿದಿದ್ದ. ಈ ಕೂಡಲೇ ಇರ್ಫಾನ್ ಅನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಇರ್ಫಾನ್ ಮೃತಪಟ್ಟಿದ್ದಾನೆ.
ಇಬ್ಬರೂ ಸಹ ಈ ಹಿಂದೆ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದರು. ಸದ್ಯ ಆರೋಪಿ ಖಾಸಿಂನನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಮದ್ಯಪಾನದ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಗಳ ಬಂಧನ : ಮದ್ಯದ ವಿಚಾರಕ್ಕೆ ಸ್ನೇಹಿತನನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಸಂತ್, ಸರಣ್ ರಾಜ್ ಹಾಗೂ ಮುಕುಂದನ್ ಎಂದು ಗುರುತಿಸಲಾಗಿದೆ.
ಜುಲೈ 27 ರ ರಾತ್ರಿ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ನ ಹಿಂಭಾಗದಲ್ಲಿ ಪ್ರಶಾಂತ್ ಎಂಬಾತನ ತಲೆಗೆ ಬಾಟಲಿಯಿಂದ ಹೊಡೆದು ಹತ್ಯೆಗೈಯಲಾಗಿತ್ತು. ಮದ್ಯದ ವಿಚಾರಕ್ಕೆ ಪ್ರಶಾಂತ್ ನ ಹತ್ಯೆ ಗೈಯಲಾಗಿತ್ತು. ಹತ್ಯೆ ಬಳಿಕ ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನು ಬಂಧಿಸಿರುವ ಸಿಟಿ ಮಾರ್ಕೆಟ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಓದಿ : ಜೀವಕ್ಕೆ ಎರವಾದ 'ಇಲಿ ಪಾಷಾಣ'.. ವಿಷ ಬೆರೆಸಿಟ್ಟಿದ್ದ ಟೊಮೆಟೊ ತಿಂದು ಮಹಿಳೆ ಸಾವು