ಬೆಂಗಳೂರು: ಜಲ ಮಂಡಳಿಯಿಂದ ಅನುಮತಿ ಪಡೆದು ನೀರಿನ ಸಂಪರ್ಕ ಕಲ್ಪಿಸಿಕೊಳ್ಳಬೇಕು. ಆದರೆ ಬಿಡಬ್ಲ್ಯೂಎಸ್‌ಎಸ್‌ಬಿ(BWSSB) ಕೊಟ್ಟ ಯಾವುದೋ ನೀರಿನ ಸಂಪರ್ಕಕ್ಕೆ ಬೈಪಾಸ್ ಮಾಡಿಕೊಂಡು ನೀರಿಗೆ ಕನ್ನ ಹಾಕಿರುವ ಘಟನೆಗಳು ಬೆಳಕಿಗೆ ಬಂದಿವೆ.
ನಗರದಾದಂತ್ಯ ಎರಡು ತಿಂಗಳ ಹಿಂದೆ ಪೋಲಾಗುತ್ತಿದ್ದ ನೀರನ್ನು ಪತ್ತೆ ಹಚ್ಚಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಾಚರಣೆ ನಡೆಸಿತ್ತು. ಶೇ.50ರಷ್ಟು ಸಮೀಕ್ಷೆ ಪೂರ್ಣವಾಗಿದ್ದು, ಪೂರ್ವ ವಲಯದಲ್ಲಿ 2.9 ಲಕ್ಷ ಸಂಪರ್ಕಗಳನ್ನು ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ 1,436 ಅಕ್ರಮ ನೀರಿನ ಸಂಪರ್ಕ ಹೊಂದಿದೆ ಎಂದು ಚೀಫ್ ಇಂಜಿನಿಯರ್ ಬಿಎಂ ಸೋಮಶೇಖರ್ ತಿಳಿಸಿದ್ದಾರೆ.
ಜಲ ಮಂಡಳಿಯಿಂದ ಕಾರ್ಯಾಚರಣೆ:
ಪಶ್ಚಿಮ ವಲಯದಲ್ಲಿ 2,20,000 ಸಂಪರ್ಕಗಳನ್ನು ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 2,338 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ. ಮಂಡಳಿಯು 10.34 ಲಕ್ಷ ಸಂಪರ್ಕಗಳನ್ನು ಹೊಂದಿದ್ದು, ಅವುಗಳಲ್ಲಿ 5.10 ಲಕ್ಷ ಸಮೀಕ್ಷೆ ಪೂರ್ಣಗೊಳಿಸಿದೆ. ನಾವು ಪ್ರತಿಮನೆಯನ್ನು ತಲುಪಲು ಮತ್ತು ಕಾನೂನುಬಾಹಿರ ನೀರಿನ ಸಂಪರ್ಕ ಹೊಂದದಂತೆ ನೋಡಿಕೊಳ್ಳಲು ಯೋಜಿಸಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಕಾನೂನುಬದ್ಧವಾಗಿ ಪಡೆದಿರುವ ನೀರಿನ ಸಂಪರ್ಕವು ನೀರಿನ ಬಳಕೆಯನ್ನು ತಿಳಿಯಲು ಅನುವು ಮಾಡಿಕೊಡುತ್ತದೆ ಎಂದರು.
ಮೂರು ಸಾವಿರಕ್ಕೂ ಅಧಿಕ ಕೇಸ್ ಪತ್ತೆ:
ಜಲಮಂಡಳಿ ಸುಮಾರು 4,000 ಅಕ್ರಮ ನೀರಿನ ಸಂಪರ್ಕಗಳನ್ನು ಪತ್ತೆ ಮಾಡಿದೆ, ಎರಡು ತಿಂಗಳ ಹಿಂದೆ ಪೋಲಾಗುತ್ತಿದ್ದ ನೀರನ್ನು ಪತ್ತೆಹಚ್ಚಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಕುರಿತು ಕಾರ್ಯಾಚರಣೆ ನಡೆಸಿದ್ದು 3,774 ಅಕ್ರಮ ನೀರಿನ ಸಂಪರ್ಕವನ್ನು ಪತ್ತೆ ಹಚ್ಚಿದೆ.
ಭಾರೀ ಮೊತ್ತದ ದಂಡ :
ಇನ್ನು ಅನಧಿಕೃತವಾಗಿ ಯಾರೆಲ್ಲ ನೀರಿನ ಸಂಪರ್ಕ ಹೊಂದಿದ್ದಾರೋ ಅವರಿಗೆಲ್ಲ ಜಲ ಮಂಡಳಿ ಅಧಿಕ ಮೊತ್ತದ ದಂಡ ವಿಧಿಸಲಿದೆ. ಕಾನೂನಾತ್ಮಕವಾಗಿ ಇದೂ ಒಂದು ರೀತಿಯಲ್ಲಿ ಕಳ್ಳತನ. ಈ ಬಗ್ಗೆ ಬಿಎಮ್ಟಿಟಿ ಪೊಲೀಸರಿಗೆ ಜಲ ಮಂಡಳಿ ಮಾಹಿತಿ ರವಾನಿಸಲಿದೆ. ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದುಕೊಂಡಿರುವರಿಗೆ ಬಿಡಬ್ಲ್ಯೂಎಸ್‌ಎಸ್‌ಬಿ(BWSSB) 5 ರಿಂದ 10 ಸಾವಿರದವರಗೆ ದಂಡ ವಿಧಿಸಲಿದೆ.
ಸಿಎಂ ಸೂಚನೆ:
2013ರಲ್ಲಿ ನೀರು ಪೋಲಾಗುವಿಕೆ ಪ್ರಕರಣಗಳು ಶೇ.49ರಷ್ಟಿತ್ತು. ಆದರೆ, ಇದೀಗ 36ಕ್ಕೆ ಇಳಿದಿದೆ. ಇತ್ತೀಚಿನ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶೇ.20ಕ್ಕೆ ಪ್ರಕರಣಗಳನ್ನು ಕಡಿತಗೊಳಿಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ(BWSSB)ಗೆ ಸೂಚನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಮದುವೆಗೆ ಅಡ್ಡಿ: ನಾಲ್ವರು ಮಕ್ಕಳ ಹತ್ಯೆ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ