ಬೆಂಗಳೂರು: ಲಾಕ್ಡೌನ್ ನಂತರ ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಬೆಂಗಳೂರು ಹಾಗೂ ಕರ್ನಾಟದ ಇತರೆ ಕಡೆಗಳಲ್ಲಿ ಕಳ್ಳತನವಾದ ರಾಯಲ್ ಎನ್ ಫೀಲ್ಡ್, ಕೆಟಿಎಮ್ ಬೈಕ್ಗಳು ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಊರಿನಲ್ಲಿ ರಾಜಾರೋಷವಾಗಿ ಓಡಾಡ್ತಿವೆ.
ಸಿಎಂ ಪಳನಿಸ್ವಾಮಿ ಕ್ಷೇತ್ರವಾದ ಎಡಪ್ಪಾಡಿಯಲ್ಲಿ ಕದ್ದ ಬೈಕ್ಗಳು ಪತ್ತೆಯಾಗಿದ್ದು, ಸದ್ಯ ಇದನ್ನ ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ. 174 ಬೈಕ್ ಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಬೈಕ್ಗಳು ಎಡಪ್ಪಾಡಿಯಲ್ಲಿ ಓಡಾಡುತ್ತಿದ್ದವು.
ತನಿಖೆ ವೇಳೆ ತಮಿಳುನಾಡಿನಿಂದ ಗ್ಯಾಂಗ್ ಒಂದು ನಗರಕ್ಕೆ ಬಂದು, ಇಲ್ಲಿ ಬೈಕ್ ಲಾಕ್ ಮುರಿದು ಕಾಲಿನಲ್ಲಿ ದೂಡಿ ಬೈಕ್ ಸಮೇತ ಎಸ್ಕೇಪ್ ಆಗ್ತಿದ್ರು. ಹಾಗೆ ಕದ್ದ ಬೈಕನ್ನು ತಮಿಳುನಾಡಿನಲ್ಲಿ ಮಾರಾಟ ಮಾಡ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಕರ್ನಾಟಕ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.