ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯ ವಶದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಆಸ್ಪತ್ರೆಗಳು, ಗ್ರಂಥಾಲಯಗಳನ್ನು ಬಿಬಿಎಂಪಿ ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಈ ಸಂಬಂಧ ಬಿಬಿಎಂಪಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಬೆಂಗಳೂರು ಮಹಾನಗರದಲ್ಲಿರುವ ಸರ್ಕಾರಿ ಶಾಲೆ, ಆಸ್ಪತ್ರೆ, ಗ್ರಂಥಾಲಯಗಳನ್ನು ಬಿಬಿಎಂಪಿಯಿಂದಲೇ ನೇರವಾಗಿ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಶಾಲೆ, ಆಸ್ಪತ್ರೆ, ಗ್ರಂಥಾಲಯಕ್ಕಾಗಿ ಸಂಗ್ರಹಿಸುವ ಸೆಸ್ಅನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು, ಇಲ್ಲೇ ಖರ್ಚು ಮಾಡಬಹುದು. ಅಲ್ಲದೇ ಇತರೆ ಅನುದಾನವನ್ನು ಬಿಬಿಎಂಪಿಗೆ ನೀಡಿ ಎಂದು ಪ್ರಸ್ತಾವನೆ ಕಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈಟಿವಿ ಭಾರತ್ಗೆ ತಿಳಿಸಿದರು.
ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಡಿಯಲ್ಲಿರುವ 203 ಗ್ರಂಥಾಲಯ ಹಾಗೂ 1ರಿಂದ 10ನೇ ತರಗತಿಯ 1,599 ಸರ್ಕಾರಿ ಶಾಲೆಗಳನ್ನು ಸರ್ಕಾರಿ ಇಲಾಖೆಯೇ ನೋಡಿಕೊಳ್ಳುತ್ತಿದೆ. ಅಲ್ಲದೆ 48 ನಗರ ಪ್ರಾಥಮಿಕ ಶಾಲೆಗಳೂ ಪಾಲಿಕೆ ಆಡಳಿತಕ್ಕೆ ಒಳಪಟ್ಟಿಲ್ಲ. ಈ 3 ಸಂಸ್ಥೆಗಳು ಸದ್ಯ ನಗರ ಜಿಲ್ಲಾ ಪಂಚಾಯತ್ ಅಡಿಗೆ ಬರುತ್ತಿದ್ದು, ಅನುದಾನಗಳು ನಗರ ಜಿಲ್ಲಾ ಪಂಚಾಯತ್ಗೆ ಹೋಗುತ್ತಿವೆ. ಆದ್ರೆ ಜನರು ಬಿಬಿಎಂಪಿಯನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ ಶಾಲೆ, ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ಆಡಳಿತಕ್ಕೆ ಕೊಟ್ಟರೆ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ಅಲ್ಲದೆ ಆಯಾ ವಾರ್ಡ್ಗಳಲ್ಲಿರುವ ಪಾಲಿಕೆ ಸದಸ್ಯರು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಅಭಿವೃದ್ಧಿ ಗಮನಿಸಲು ಸಾಧ್ಯವಾಗುತ್ತದೆ. ಸದ್ಯ ಜಿಲ್ಲಾ ಪಂಚಾಯತ್ ಅಡಿ ಬರುತ್ತಿರುವುದರಿಂದ ಪಾಲಿಕೆ ಸದಸ್ಯರಿಗೆ ನೇರ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ.
![ಬಿಬಿಎಂಪಿ ನೋಟಿಸ್](https://etvbharatimages.akamaized.net/etvbharat/prod-images/3727253_notice-3.jpg)
ಅಲ್ಲದೆ ನಗರ ಜಿಲ್ಲಾ ಪಂಚಾಯತ್ ಅಡಿಯಲ್ಲೇ ಗ್ರಂಥಾಲಯಕ್ಕೆ ಸರ್ಕಾರ ಅನುದಾನ ಕೊಡುತ್ತಿದೆ. ಇದನ್ನೂ ಬಿಬಿಎಂಪಿಗೆ ನೀಡಿದರೆ ಸ್ವಂತ ಅನುದಾನವನ್ನೂ ಬಳಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯ. ಹೀಗಾಗಿ ಸರ್ಕಾರಕ್ಕೆ ಈ 3 ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
![ಬಿಬಿಎಂಪಿ ನೋಟಿಸ್](https://etvbharatimages.akamaized.net/etvbharat/prod-images/3727253_310_3727253_1562117289677.png)
ಪಾಲಿಕೆ ನೀಡುವ ಸೆಸ್ ನಗರಕ್ಕೆ ವ್ಯಯವಾಗುತ್ತಿಲ್ಲ. ಬಿಬಿಎಂಪಿ ವಾರ್ಷಿಕ 100 ಕೋಟಿ ರೂ. ಗ್ರಂಥಾಲಯ ಉಪ ತೆರಿಗೆ ಸಂಗ್ರಹಿಸಿ, ಸರ್ಕಾರಕ್ಕೆ ಪಾವತಿಸುತ್ತಿದೆ. ಆದರೆ ನಗರದ 203 ಲೈಬ್ರರಿಗೆ 50 ಕೋಟಿ ರೂಪಾಯಿ ಮಾತ್ರ ವ್ಯಯಿಸುತ್ತಿದೆ. ಉಳಿದಿದ್ದನ್ನು ಬೇರೆ ಜಿಲ್ಲೆಗಳಿಗೆ ಖರ್ಚು ಮಾಡುತ್ತಿದೆ. ಇದರ ಬದಲು ನಗರದ ತೆರಿಗೆ ಹಣವನ್ನು ನಗರದ ಶಾಲೆ, ಲೈಬ್ರರಿಗಳ ಅಭಿವೃದ್ಧಿಗೇ ಬಳಸಿದರೆ ಉತ್ತಮವಾಗಿ ಅಭಿವೃದ್ಧಿಯಾಗಲಿದೆ ಎಂದು ಆಯುಕ್ತರು ಈ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದಾರೆ.
ಆದ್ರೆ ಈ ಪ್ರಸ್ತಾವನೆ ವಿಚಾರ ಇನ್ನೂ ಮೇಯರ್ ಗಂಗಾಂಬಿಕೆಯವರಿಗೇ ತಿಳಿದಿಲ್ಲ. ಇನ್ನು ಈ ವಿಚಾರ ಚರ್ಚೆ ಹಂತದಲ್ಲಿದೆ. ಅಲ್ಲದೆ ಲೈಬ್ರರಿ ನಿರ್ದೇಶಕರು ಈ ಪ್ರಸ್ತಾವನೆ ಬೇಡ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತೇವೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
![ಬಿಬಿಎಂಪಿ ನೋಟಿಸ್](https://etvbharatimages.akamaized.net/etvbharat/prod-images/3727253_notice-1.jpg)
ಬಿಬಿಎಂಪಿಗೆ ಸಿಬ್ಬಂದಿ ಕೊರತೆ?
ಬಿಬಿಎಂಪಿಯ 156 ಶಾಲೆಗಳ ನಿರ್ವಹಣೆಯೇ ಸರಿಯಾಗಿ ಆಗುತ್ತಿಲ್ಲ. ಶಿಕ್ಷಣ ಸಮಿತಿಗೆ ಬೇಕಾದ ಅಧಿಕಾರಿಗಳು, ಸಿಬ್ಬಂದಿ, ನೌಕರರು ಇಲ್ಲ. ಇನ್ನು ಎಲ್ಲಾ ಸರ್ಕಾರಿ ಶಾಲೆಗಳನ್ನೂ ಪಾಲಿಕೆಯ ವಶಕ್ಕೆ ಪಡೆದರೆ ತೀವ್ರವಾಗಿ ಸಿಬ್ಬಂದಿ ಕೊರತೆ ಎದುರಾಗಲಿದೆ. ಹೀಗಾಗಿ ಬಿಬಿಎಂಪಿ ತನಗೆ ಹಸ್ತಾಂತರ ಮಾಡುವಂತೆ ಕೇಳಿದ್ರೂ ಎಷ್ಟರ ಮಟ್ಟಿಗೆ ಗುಣಮಟ್ಟದಲ್ಲಿ ನಿರ್ವಹಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.