ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿ.ಜೆ.ಹಳ್ಳಿ ಠಾಣೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಭೇಟಿ ನೀಡಿದ್ದು, ಬಂಧಿತ 304 ಆರೋಪಿಗಳ ಮೇಲೆ ರೌಡಿಶೀಟರ್ ಪಟ್ಟಿ ತೆರೆಯಲು ಸಿದ್ಧತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಮತ್ತೆ 40 ಮಂದಿಯನ್ನು ಬಂಧಿಸಲಾಗಿದೆ. 304 ಮಂದಿಯ ಮೇಲೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ರೌಡಿಶೀಟರ್ ಪಟ್ಟಿ ತೆರೆಯಲಿದ್ದಾರೆ. ಸದ್ಯ ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಭಾಗಿಯಾಗದೆ ಇರುವವರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಅಮಾಯಕರ ಬಂಧನವಾಗಬಾರದು ಎಂಬ ದೃಷ್ಟಿಯಿಂದ ಪ್ರತಿಯೊಬ್ಬರ ಪಿನ್ ಟು ಪಿನ್ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.
ರೌಡಿ ಪಟ್ಟಿ ತೆರೆದರೆ ಒಂದು ವೇಳೆ ಬಿಡುಗಡೆಗೊಂಡರೂ ಆರೋಪಿಗಳು ಪೊಲೀಸರ ಹದ್ದಿನ ಕಣ್ಣಿನಲ್ಲಿರುತ್ತಾರೆ. ಈ ಕಾರಣಕ್ಕೆ ಪ್ರತಿಯೊಬ್ಬರ ಮೇಲೆ ರೌಡಿ ಪಟ್ಟಿ ತೆರೆಯಲು ನಿರ್ಧಾರ ಮಾಡಲಾಗಿದೆ. ನಿನ್ನೆ ಬಂಧಿತನಾದ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ವಾಜೀದ್ನನ್ನ ವಿಶೇಷ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಈತ ಘಟನೆಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ. ಅಲ್ಲದೆ ಫೇಸ್ಬುಕ್ಲ್ಲಿ ಘಟನೆಯ ಕುರಿತು ಲೈವ್ ಮಾಡಿದ್ದ. ಹೀಗಾಗಿ ವಿಚಾರಣೆಯನ್ನ ತೀವ್ರಗೊಳಿಸಲಾಗಿದೆ. ಈತನ ಜೊತೆ ನೂರಾರು ಮಂದಿ ಇರುವ ಕಾರಣ ಅವರಿಗಾಗಿ ಕೂಡ ಶೋಧ ಮುಂದುವರೆದಿದೆ.