ಬೆಂಗಳೂರು: ಡಿ.ಜೆ. ಹಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಮಾಸ್ಟರ್ ಮೈಂಡ್ಗಳು ಅರೆಸ್ಟ್ ಆಗಿದ್ದಾರೆ.
ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಆರೋಪಿಗಳು ಘಟನೆ ನಡೆದ ದಿನ ನೂರಾರು ಜನರನ್ನು ಕರೆಸಿ ಗಲಭೆ ಸೃಷ್ಟಿ ಮಾಡಿ ಠಾಣೆಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸದ್ಯ ನಿನ್ನೆ ಇಡೀ ದಿನ ನಡೆದ ಜೆಡಿಎಸ್ ಮುಖಂಡ ವಾಜಿದ್ ಡ್ರಿಲ್ನಿಂದ ಮಾಹಿತಿ ಆಧರಿಸಿ, ನಾಲ್ವರ ಬಂಧನ ಮಾಡಿ ತನಿಖೆ ಚುರುಕುಗೊಳಿಸಲಾಗಿದೆ. ವಾಜಿದ್ ಸೂಚನೆಯ ಮೇರೆಗೆ ಘಟನೆ ನಡೆದ ದಿನ ಈ ನಾಲ್ವರು, ನೂರಾರು ಜನರನ್ನ ಪ್ರಚೋದಿಸಿ ಕರೆತಂದಿದ್ದರು. ನಂತರ ಜನರನ್ನು ಸೇರಿಸಿ, ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದರು. ಈ ಕುರಿತಾಗಿ ಅವರು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಸದ್ಯ ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 73 ಎಫ್ಐಆರ್ ದಾಖಲಾಗಿದ್ದು, ಕೆ.ಜಿ. ಹಳ್ಳಿಯಲ್ಲಿ 19 ಹಾಗೂ ಡಿ.ಜೆ. ಹಳ್ಳಿಯಲ್ಲಿ 54 ಎಫ್ಐಆರ್ ದಾಖಲಾಗಿದೆ. ಸದ್ಯ ವಾಹನಗಳಿಗೆ ಬೆಂಕಿ, ಆಸ್ತಿ ಪಾಸ್ತಿ ನಾಶ ಕೇಸ್ ದಾಖಲಾಗುತ್ತಿದ್ದು, ಮತ್ತೆ ಇಂದು ಎಫ್ಐಆರ್ ಸಂಖ್ಯೆ ಏರಿಕೆಯಾಗಿದೆ.