ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ಗಂಟೆ ಬಾಕಿಯಿದೆ. ಎರಡು ವರ್ಷಗಳ ಬಳಿಕ ಸಂಭ್ರಮಾಚರಣೆಗೆ ಅವಕಾಶ ದೊರೆತಿರುವುದು ಪಾರ್ಟಿ ಪ್ರಿಯರ ಜೋಶ್ ಹೆಚ್ಚಿಸಿದೆ. ಸಿಲಿಕಾನ್ ಸಿಟಿಯ ಹೋಟೆಲ್ಸ್, ಪಬ್, ಬಾರ್ & ರೆಸ್ಟೋರೆಂಟ್ಗಳಲ್ಲಿ ತುಸು ಜೋರಾಗಿಯೇ ಇಂದು ಜನ ಸೇರುವ ನಿರೀಕ್ಷೆಯಿದೆ. ಆದ್ದರಿಂದ ಸೂಕ್ತ ಭದ್ರತೆಗೆ ಮೊದಲ ಆದ್ಯತೆ ನೀಡಿರುವ ಬೆಂಗಳೂರು ಪೊಲೀಸರು ಮತ್ತೊಂದು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇಂದು ಪಾರ್ಟಿ ಮೂಡ್ನಲ್ಲಿದ್ದವರು ಟೆರೆಸ್ ಮೇಲೆ ಹೋಗುವಂತಿಲ್ಲ. ಮದ್ಯಪಾನದ ಅಮಲಿನಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳೂ ಸಹ ಇರುವುದರಿಂದ ಓಪನ್ ಟೆರೆಸ್ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪಬ್, ಹೋಟೆಲ್, ಬಾರ್ & ರೆಸ್ಟೋರೆಂಟ್ಗಳ ಮಾಲೀಕರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಟೆರೇಸ್ ಮೇಲೆ ಹೋಗುವ ಬಾಗಿಲುಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಒಂದು ವೇಳೆ, ಟೆರೇಸ್ ನಲ್ಲಿ ಪಾರ್ಟಿ ಹಾಲ್ ಗಳಿದ್ದರೆ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ನೆಲಮಂಗಲದಲ್ಲಿ ವರ್ಷಾಚರಣೆಯ ಸಂಭ್ರಮ: ಹೊಸ ವರ್ಷಾಚರಣೆ ಮತ್ತು ವೀಕೆಂಡ್ ಹಿನ್ನೆಲೆ ಸಿಟಿ ರೌಂಡ್ಸ್ ಹಾಕಿದ ನೆಲಮಂಗಲ ಪೊಲೀಸರು ಹೈವೇ ಡಾಬಾ ರೆಸ್ಟೋರೆಂಟ್ಗಳ ಮಾಲೀಕರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
ಹೊಸವರ್ಷಾಚರಣೆ ಹಿನ್ನೆಲೆ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಮತ್ತು ಮದ್ಯದ ಪಾರ್ಟಿ ಮಾಡುವ ಬೆಂಗಳೂರು ಹೊರವಲಯದ ನೆಲಮಂಗಲ ಸುತ್ತಮುತ್ತಲಿನ ಡಾಬಾ ಮತ್ತು ರೆಸ್ಟೋರೆಂಟ್ಗಳಿಗೆ ಲಗ್ಗೆ ಇಡುತ್ತಾರೆ. ವಾರಾಂತ್ಯದ ಜೊತೆ ಹೊಸ ವರ್ಷಾಚರಣೆ ಬಂದಿರುವುದು ಸಂಭ್ರಮವನ್ನು ಹೆಚ್ಚು ಮಾಡಿದೆ.
ಒಮ್ಮೆಲೇ ಹೆದ್ದಾರಿ ಡಾಬಾ ಗಳಿಗೆ ಜನ ಬರುವುದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ ಮತ್ತು ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಟೌನ್ ಇನ್ಸ್‌ಪೆಕ್ಟರ್ ಶಶಿಧರ್ ನೇತೃತ್ವದ ಪೊಲೀಸರ ತಂಡ ಡಾಬಾ ಮತ್ತು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್: ಕ್ರಿಸ್‌ಮಸ್ ಹಾಲಿಡೇ, ನ್ಯೂ ಇಯರ್ ಹಾಗೂ ವೀಕೆಂಡ್ ಹಿನ್ನೆಲೆ ರಜೆ ಬೆಂಗಳೂರಿಗರು ನಗರ ತೊರೆದು ತಮ್ಮ ಊರುಗಳಿಗೆ ಹೋಗುತ್ತಾರೆ, ಇದರಿಂದ ರಾಷ್ಟ್ರೀಯ ಹೆದ್ದಾರಿ 48, ಬೆಂಗಳೂರು ತುಮಕೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ರಸ್ತೆಯಲ್ಲಿ ವಾಹನಗಳ ದಟ್ಟನೆ ಉಂಟಾಗಲಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಅಗತ್ಯ ಇದೆ. ಆದರೆ ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದರಿಂದ ಪೊಲೀಸರ ಕೊರತೆ ಇದೆ.
ಲಭ್ಯ ಇರುವ ಸಿಬ್ಬಂದಿಗಳಿಂದಲೇ ಸಂಚಾರ ನಿಯಂತ್ರಣ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ. ರೂಲ್ಸ್ ಬ್ರೇಕ್ ಮಾಡೋರಿಗೆ ದಂಡ ಕಟ್ಟಿಟ್ಟ ಬುತ್ತಿಯಾಗಲಿದೆ.
ಇದನ್ನೂ ಓದಿ: 2022ರ ಹಿನ್ನೋಟ: ರಾಜ್ಯದ ಗಮನ ಸೆಳೆದ ಪ್ರಮುಖ ರಾಜಕೀಯ ಬೆಳವಣಿಗೆಗಳು..