ಬೆಂಗಳೂರು: ಸಿಲಿಕಾನ್ ಸಿಟಿ ಐಟಿ ಬಿಟಿ ಜತೆಗೆ ವಿಜ್ಞಾನದ ರಾಜಧಾನಿ ಆಗಬೇಕು. ಪ್ರಪಂಚಲ್ಲೇ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಬೆಂಗಳೂರು ಮತ್ತು ಕರ್ನಾಟಕ ಗ್ರೇಟ್ ಆಗಬೇಕು. ಇದು ನನ್ನ ಕನಸಾಗಿದೆ ಎಂದು ಭಾರತ ರತ್ನ ಸಿಎನ್‌ಆರ್ ರಾವ್ ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್‌ಟಾಟಾ ಸಭಾಂಗಣದಲ್ಲಿ ನಡೆದ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ವಿಜನ್ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.
ಬೆಂಗಳೂರನ್ನು ಐಟಿ ಬಿಟಿ ರಾಜಧಾನಿ ಅಂತಾರೆ. ಬೆಂಗಳೂರನ್ನು ವಿಜ್ಞಾನದ ರಾಜಧಾನಿ ಅನ್ನಬೇಕು. ಪ್ರಪಂಚದಲ್ಲೇ ಬೆಂಗಳೂರು, ಕರ್ನಾಟಕ ನಂಬರ್ ಒನ್ ಆಗಬೇಕು ಅನ್ನೋ ಆಸೆ ಇದೆ. ಅದಕ್ಕೆ ಅವಕಾಶ ಇದೆ. ಜವಾಹರಲಾಲ್ ನೆಹರೂ ಸೆಂಟರ್ ಪ್ರಪಂಚದಲ್ಲಿ 7ನೇ ಸ್ಥಾನ ಪಡೆದಿದೆ. ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು, ಕರ್ನಾಟಕ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಅದಕ್ಕೆ ಸರ್ಕಾರ ಹೆಚ್ಚೆಚ್ಚು ಪ್ರೋತ್ಸಾಹ ಕೊಡಬೇಕು. ಹಳ್ಳಿಗಳು, ಇಂಟೀರಿಯರ್ ಸ್ಥಳಕ್ಕೆ ಹೋಗಿ ತರಬೇತಿ ಕೊಡಬೇಕು. ಸಿಟಿ ಮಕ್ಕಳಿಗಿಂತ ಹಳ್ಳಿ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಅಂತವರಿಗೆ ಹೆಚ್ಚೆಚ್ಚು ಪ್ರೋತ್ಸಾಹ ಕೊಡಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ, ಸಾಧನೆ ಮಾಡಿದ ವಿಜ್ಞಾನಿಗಳು ಹಾಗೂ ಇಂಜಿನಿಯರ್ಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಪ್ರೊ, ಸಿಎನ್‌ಆರ್ ರಾವ್ ಸೇರಿ ಹಲವರು ಭಾಗಿಯಾಗಿದ್ದರು.