ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯನ್ನು ಕೊಂದು, ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಡೇಪಾಳ್ಯ ಠಾಣಾ ವ್ಯಾಪ್ತಿಯ ಮುನೇಶ್ವರನಗರದಲ್ಲಿ ನಡೆದಿದೆ. ಬಂಡೇಪಾಳ್ಯ ವ್ಯಾಪ್ತಿ ಸಾಯಿ ಆಶೀರ್ವಾದ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಜರೀನಾ ತಾಜ್ (55) ಮತ್ತು ಮಗಳು ರಜಿಯಾ ಸುಲ್ತಾನ (21) ಮೃತರು. ತಾಯಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಬಳಿಕ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ರಜಿಯಾ ಸುಲ್ತಾನ, ಕೌಟುಂಬಿಕ ಕಲಹದ ಹಿನ್ನೆಲೆ ಪತಿಯಿಂದ ದೂರವಾಗಿದ್ದರು. ತಾಯಿ ಜರೀನಾಗೆ ಪುತ್ರಿ ಹುಟ್ಟಿದ ಕೆಲವೇ ದಿನಗಳಲ್ಲಿ ಪತಿ ಸಾವನ್ನಪ್ಪಿದ್ದರು. ಹೀಗಾಗಿ ಜರೀನಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ರಜಿಯಾ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.
ಕಳೆದ ರಜಿಯಾ ಮೂರು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಅವರ ಸಹೋದ್ಯೋಗಿ ಶುಕ್ರವಾರ ಸಂಜೆ ದೂರವಾಣಿ ಕರೆ ಮಾಡಿದಾಗಲೂ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಒಳಗೆ ಹೋಗಿ ನೋಡಿದಾಗ ತಾಯಿ, ಮಗಳು ಸಾವನ್ನಪ್ಪಿರುವ ದೃಶ್ಯ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜರೀನಾ ತಾಜ್ ಹಾಸಿಗೆ ಮೇಲೆ ಮಲಗಿದ್ದ ರೀತಿಯಲ್ಲೇ ಮೃತಪಟ್ಟಿದ್ದು, ರೂಂನಲ್ಲಿ ರಜಿಯಾ ಸುಲ್ತಾನ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಇಬ್ಬರು ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ. ಜರೀನಾ ಸಹೋದರರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಡೇಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶ್ರದ್ಧಾ ಕೊಲೆ ಪ್ರಕರಣ: ಮೇ 9ಕ್ಕೆ ಹೆಚ್ಚುವರಿ ಸೆಷನ್ಸ್ ಕೋರ್ಟ್ನಿಂದ ತೀರ್ಪು ಸಾಧ್ಯತೆ