ಬೆಂಗಳೂರು : ವ್ಯವಹಾರದ ಮೇಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಸುಖಸಾಗರ್ ಹೊಟೇಲ್ನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ.
ವಿ.ಕೆ.ಗುರು ಸ್ವಾಮಿ (55) ಎಂಬುವರೇ ಹಲ್ಲೆಗೊಳಗಾದ ವ್ಯಕ್ತಿ. ಇವರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಮಧ್ಯವರ್ತಿಯೊಬ್ಬರ ಮೂಲಕ ವ್ಯವಹಾರಿಕ ಸಂಬಂಧವಾಗಿ ಭಾನುವಾರ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದರು. ಇವರ ಚಲನವಲನವನ್ನು ಅರಿತಿದ್ದ ಐವರು ಆರೋಪಿಗಳ ಗ್ಯಾಂಗ್, ತಮಿಳುನಾಡು ನೋಂದಣಿ ಇರುವ ಕಾರ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಸೋಮವಾರ ಸಂಜೆ 5 ಗಂಟೆ ವೇಳೆ ಸುಖಸಾಗರ್ ಹೊಟೇಲ್ನಲ್ಲಿ ಗುರುಸ್ವಾಮಿ ಟೀ ಕುಡಿಯುವಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಗುರುಸ್ವಾಮಿ ತಲೆ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ವಿರುದ್ಧ ಮದುರೈ ಸೇರಿದಂತೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 20ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 2002ರಿಂದ ಈತನ ವಿರೋಧಿ ದಿವಂಗತ ರಾಜಪಾಂಡಿ ಗ್ಯಾಂಗ್ ನೊಂದಿಗೆ ವೈಷ್ಯಮ ಬೆಳೆಸಿಕೊಂಡಿದ್ದು, 2002 ರಲ್ಲಿ ಚಿನ್ನುಮುನುಸ್ವಾಮಿ ಎಂಬುವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ.
ಹೀಗಾಗಿ ಗುರುಸ್ವಾಮಿ ಹಾಗೂ ರಾಜಪಾಂಡಿ ಇಬ್ಬರ ನಡುವೆ ಗ್ಯಾಂಗ್ ವಾರ್ ನಡೆಯುತಿತ್ತು. ಎರಡು ದಿನಗಳ ಹಿಂದಷ್ಟೇ ಮಧುರೈನ ಸ್ಥಳೀಯ ನ್ಯಾಯಾಲಯಕ್ಕೆ ಕೊಲೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಗುರುಸ್ವಾಮಿ ಬೆಂಗಳೂರಿಗೆ ಬಂದಿರುವುದನ್ನು ಅರಿತ ವಿರೋಧಿ ಗ್ಯಾಂಗ್ ಕೃತ್ಯವೆಸಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಹೇಳಿದ್ದೇನು? : ಮಧುರೈ ಮೂಲದವನಾಗಿರೋ ವಿ.ಕೆ ಗುರುಸ್ವಾಮಿ ಮೇಲೆ ಹಲವು ಕೊಲೆ, ಕೊಲೆ ಯತ್ನ ಕೇಸ್ಗಳಿದ್ದು, ಕಿರುತೈ ಎಂಬ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಒಬ್ಬ ವ್ಯಕ್ತಿ ಜೊತೆ ಈತನಿಗೆ 30ವರ್ಷಗಳಿಂದ ವೈಷಮ್ಯ ಇತ್ತು. ನಗರದಲ್ಲಿ ಇವತ್ತು ರಿಯಲ್ ಎಸ್ಟೇಟ್ ಏಜೆಂಟ್ವೊಬ್ಬನ ಜೊತೆ ಮನೆ ಹುಡುಕಿ ಬಳಿಕ ಸುಖಸಾಗರ್ ಹೊಟೇಲ್ನಲ್ಲಿ ಏಜೆಂಟ್ ಜೊತೆ ಕಾಫಿ ಕುಡಿಯೋಕೆ ಬಂದಿದ್ದರು. ವೇಳೆ ಈತನ ಎದುರಾಳಿ ಗ್ಯಾಂಗ್ನ ಐವರು ಆರೋಪಿಗಳು ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ತೀವ್ರವಾಗಿ ಹಲ್ಲೆಗೊಳಗಾದ ಗುರುಸ್ವಾಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನ ಜೊತೆಗೆ ಇದ್ದ ರಿಯಲ್ ಎಸ್ಟೇಟ್ ಏಜೆಂಟ್ಗೂ ಗಾಯಗಳಾಗಿವೆ. ಮಧುರೈ ಮೂಲದವನಾದ ಕಾರಣ ಈಗಾಗಲೇ ಎರಡು ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಗ್ಯಾಂಗ್ ವಾರ್ ಅನ್ನೋದು ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಡ್ಯೂಟಿ ಮುಗಿದಿದೆ ಎಂದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಸವಾರನಿಂದ ಹಲ್ಲೆ- Video