ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಸರಗಳ್ಳತನ, ಮೊಬೈಲ್ ಕಳ್ಳತನ, ದರೋಡೆ ಸೇರಿದಂತೆ 40ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ರಫೀಕ್ ಹಾಗೂ ತೌಫೀಕ್ ಸಾಧಿಕ್ ಬಂಧಿತ ಆರೋಪಿಗಳು. ಮೇ 27ರಂದು ಬೈಕಿನಲ್ಲಿ ಬಂದ ಆರೋಪಿಗಳು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಮ್ಮ ಎಂಬ 70 ವರ್ಷದ ವೃದ್ದೆಯ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು.
ಇನ್ನು ಈ ಬಗ್ಗೆ ಕುರಿತು ಮಾತನಾಡಿದ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರು, ಮೇ 27ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸರಗಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ, ಆರೋಪಿಗಳಿಬ್ಬರು ಸರಗಳ್ಳತನ ಪ್ರಕರಣವೊಂದರಲ್ಲಿ ಉಡುಪಿ ಜಿಲ್ಲೆಯ ಕಾಪು ಠಾಣೆಯ ಪೊಲೀಸರಿಂದ ಬಂಧನವಾಗಿರುವುದನ್ನು ತಿಳಿದು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯಲಾಗಿತ್ತು.
ಈ ವೇಳೆ ಬಂಧಿತರಿಂದ ಮೂರು ಲಕ್ಷ ರೂ ಮೌಲ್ಯದ ಒಟ್ಟು 49 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಸಂದರ್ಭದಲ್ಲಿ ಮೊಹಮ್ಮದ್ ರಫೀಕ್ ಹಾಗೂ ತೌಫೀಕ್ ಸಾಧಿಕ್ ಇಬ್ಬರು ಮಹಾಲಕ್ಷ್ಮಿ ಲೇಔಟ್ ಹಾಗೂ ಮಲ್ಲೇಶ್ವರಂನಲ್ಲಿ ಸರಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದರು. ಬಂಧಿತರ ವಿರುದ್ಧ ಬೆಂಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗದ ಹಲವೆಡೆ ಪ್ರಕರಗಳು ದಾಖಲಾಗಿರುವುದು ಕಂಡು ಬಂದಿವೆ ಎಂದು ಹೇಳಿದರು.
ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಐವರ ಬಂಧನ : ಮತ್ತೊಂದೆಡೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಐವರು ಆರೋಪಿಗಳನ್ನ ಬಸವನಗುಡಿ ಹಾಗೂ ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಮೊಬೈಲ್ ಫೋನ್‌ಗಳು, ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಬಂಧಿತರಿಂದ 11 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳು, ವಿವಿಧ ಕಂಪನಿಗಳ 24 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಐಷಾರಾಮಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದ ಜಮೀರ್, ಸಾಗರ್, ಮಿಥುನ್ ಹಾಗೂ ಅಫ್ನಾನ್ ಎಂಬ ಆರೋಪಿಗಳನ್ನು ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನಗಳನ್ನ ಕಳುವು ಮಾಡುತ್ತಿದ್ದ ಚಂದ್ರಕಾಂತ್ ಎಂಬಾತ ಕಳ್ಳತನ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಹೊರಬಂದಿದ್ದನು. ಪುನಃ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ನಂದಿನಿ ಲೇಔಟ್ ಠಾಣಾ ಪೊಲೀಸರು ಆತನಿಂದ 8.5ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನ, ಒಂದು ಆಟೋ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಂಧನದಿಂದ ನಂದಿನಿ ಲೇಔಟ್, ವಿಜಯನಗರ, ಹೆಬ್ಬಾಳ, ಬಗಲಗುಂಟೆ ಸೇರಿದಂತೆ ವಿವಿಧೆಡೆ ದಾಖಲಾಗಿದ್ದ 14 ಪ್ರಕರಣಗಳು ಪತ್ತೆಯಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.
ಸಿಸಿ ಟಿವಿ ಕ್ಯಾಮರಾಕ್ಕೆ ಬಟ್ಟೆ ಮುಚ್ಚಿ ಬೈಕ್ ಕಳ್ಳತನ ( ದಾವಣಗೆರೆ): ಕಳ್ಳತನ ಆಗದಿರಲಿ, ಕಳ್ಳತನ ಆದ್ರೂ ಕಳ್ಳರ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಲಿ ಎಂದು ಅನೇಕ ಮಂದಿ ಭದ್ರತೆ ದೃಷ್ಟಿಯಿಂದ ತಮ್ಮ ಮನೆಗಳಿಗೆ ಸಿಸಿಟಿವಿಗಳನ್ನು ಅಳವಡಿಸಿರುತ್ತಾರೆ. ಆದರೆ, ಚಾಲಾಕಿ ಕಳ್ಳರು ಸಿಸಿ ಟಿವಿ ಕ್ಯಾಮರಾಗಳಿಗೆ ಬಟ್ಟೆ ಮುಚ್ಚಿ ಬೈಕ್ ಕಳ್ಳತನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಸಮೀಪದ ಎಸ್ ಬಿಐ ಬ್ಯಾಂಕ್ ಮುಂದೆ ಕಳ್ಳತನ ನಡೆದಿದೆ.
ಬಸವಾಪಟ್ಟಣ ಗ್ರಾಮದ ಕೆ.ಬಿ.ಶಿವಲಿಂಗಪ್ಪ ಎಂಬುವರ ಬೈಕ್ ಕಳವು ಆಗಿದ್ದು, ಎಸ್ ಬಿಐ ಬ್ಯಾಂಕ್ ಕಟ್ಟಡದಲ್ಲಿ ಮೇಲಿನ ಮನೆಯಲ್ಲಿ ವಾಸವಾಗಿದ್ದ ಶಿವಲಿಂಗಪ್ಪನವರು ಪ್ರತಿನಿತ್ಯದಂತೆ ಬ್ಯಾಂಕ್ ಮುಂದೆ ಬೈಕ್ ನಿಲ್ಲಿಸಿದ್ದರು. ತಡರಾತ್ರಿ ಬಂದ ಕಳ್ಳರು ಬ್ಯಾಂಕಿನ ಸಿಸಿ ಕ್ಯಾಮರಾಕ್ಕೆ ಬಟ್ಟೆ ಮುಚ್ಚಿ ಕಳ್ಳತನ ಮಾಡಿದ್ದಾರೆ. ಆದರೆ, ಬೈಕ್ ಕಳ್ಳತನ ಮಾಡುವಾಗ ಕಳ್ಳರು ಸಿಸಿ ಟಿವಿ ಕ್ಯಾಮರಾಕ್ಕೆ ಬಟ್ಟೆ ಮುಚ್ಚುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಘಟನೆ ಬಸವಾಪಟ್ಟಣ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಜರುಗಿರುವುದು ಅಚ್ಚರಿಗೆ ಕಾರಣವಾಗಿದ್ದು, ಪೊಲೀಸರು ರಾತ್ರಿ ಬೀಟ್ ಮಾಡದೇ ಇರುವುದಕ್ಕೆ ಈ ಕೃತ್ಯ ನಡೆದಿದ್ದು, ಇದು ಪೋಲಿಸರ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇದರ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಗಳೂರು ಸಿಸಿಬಿ ಕಾರ್ಯಾಚರಣೆ: ₹9 ಲಕ್ಷ ಮೌಲ್ಯದ ಎಂಡಿಎಂಎ ವಶ, ಮೂವರ ಬಂಧನ