ಬೆಂಗಳೂರು: ದಿನೇ ದಿನೆ ನಗರದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ, ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್ಡೌನ್ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆ ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕರ್ಫ್ಯೂ ಹಾಗೂ ಲಾಕ್ಡೌನ್ ಇರಲಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಮೊದಲ ಎರಡು ಹಂತದ ಲಾಕ್ಡೌನ್ ಹೇಗಿತ್ತೋ, ಅದೇ ರೀತಿ ಭಾನುವಾರ ಸಹ ಇರಲಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸುಖಾ ಸುಮ್ಮನೆ ಮನೆಯಿಂದ ಹೊರ ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಾಕ್ಡೌನ್ ಜಾರಿ ಹಿನ್ನೆಲೆ ಆಸ್ಪತ್ರೆಗಳು, ಮೆಡಿಕಲ್ಸ್, ದಿನಸಿ ಅಂಗಡಿ, ಹೋಟೆಲ್ (ಪಾರ್ಸಲ್ ಮಾತ್ರ), ತರಕಾರಿ, ಮಾಂಸದ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಇರಲಿದೆ. ಹಿಂದೆ ಇದ್ದಂತೆ ಲಾಕ್ಡೌನ್ ಸಹ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.
ಐಪಿಎಸ್ ಅಧಿಕಾರಿ ಪತ್ನಿ ವಿರುದ್ಧ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಘಟನೆ ಕುರಿತಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು.