ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಸಿಲಿಕಾನ್ ಸಿಟಿಯನ್ನು ಡ್ರಗ್ಸ್ ಮಾಫಿಯಾದಿಂದ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ. ನಗರದಲ್ಲಿ ಆಗ್ನೇಯ ವಿಭಾಗ ಹಾಗೂ ಪೂರ್ವ ವಿಭಾಗ ಪೊಲೀಸರು ದಾಳಿ ಮಾಡಿ ರಾತ್ರಿ ಪಾರ್ಟಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಒಟ್ಟು 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 90 ಲಕ್ಷ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳಾದ 1100 ಎಲ್‌ಎಸ್‌ಡಿ, ಸ್ಟಿಪ್, 980ಎಂಡಿಎಂಎ ಟ್ಯಾಬ್‌ಲೆಟ್ಸ್ 450ಗ್ರಾಂ ಎಡಿಎಂ ಕ್ರಿಸ್ಟಲ್, 25ಗ್ರಾಂ ಬ್ರೌನ್‌ಶುಗರ್,500 ಮಿ.ಲೀ ವಿಡ್ ಆಯಿಲ್ ಮತ್ತು 48 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳೆಲ್ಲ ವಿದ್ಯಾರ್ಥಿನಿಯರು ಹಾಗೂ ಹೈಫೈ ಯುವಕರೆ ಆಗಿದ್ದಾರೆ. ಈ ಡ್ರಗ್ಸ್ ಜಾಲದಲ್ಲಿ ತೊಡಗಿದ್ದು ಸದ್ಯ ಈ ಆರೋಪಿಗಳು ಡಾರ್ಕ್‌ವೆಬ್ ಅಂತರ್ಜಾಲದ ಮುಖಾಂತರ ಬಿಟ್ ಕಾಯಿನ್ ಬಳಸಿ ಸ್ಟಾಂಪ್‌ಪಿಲ್ಸ್, ಚಾರ್ಲಿ ಮುಂತಾದ ಮಾದಕ ವಸ್ತು ಖರೀದಿಸಿ, ಡೊಂಜೊ ರ್ಯಾಪಿಡ್ ಬೈಕ್ ಮುಖಾಂತರ ನಗರದ ಹಲವೆಡೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಬಂಧಿತರ ಪೈಕಿ ಓರ್ವ ಬಿಸಿಎ ವಿದ್ಯಾರ್ಥಿ ಕೇವಲ್, ಎಂ ಲೋಹಿತ್ ಬಿಸಿಎ ಪದವೀಧರ. ಬೆಂಗಳೂರು ಮತ್ತು ಗೋವಾಗಳಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿ ಆಫ್ರಿಕಾ ಮತ್ತು ನೈಜಿರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿ ಮಾಡಿ ಅದನ್ನು ಮಾರಾಟ ಮಾಡಿ ಅಕ್ರಮ ಹಣ ಗಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದ ವೈಭವ್ ಜೈನ್ ಕೂಡ ಈ ಪ್ರಕರಣದಲ್ಲಿ ಆರೋಪಿ. ಸದ್ಯ ಆತ ತಲೆಮರೆಸಿಕೊಂಡಿದ್ದು ಆರೋಪಿಗಾಗಿ ತನಿಖೆ ಮುಂದುವರೆದಿದೆ.
ಹಾಗೆ ಆಗ್ನೇಯ ವಿಭಾಗದ ಪೊಲೀಸರು ಕಾರ್ಯಾಚರಣೆ ಮಾಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಬಳಿ ವಿಶ್ವಾಸ್ ಹಾಗೂ ಅಂಬರೀಶ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 165 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದು 49 ಲಕ್ಷದ 50 ಸಾವಿರ ರೂ. ಬೆಲೆ ಬಾಳುವುದಾಗಿದೆ. ಹಾಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ರೌಪ್ ಆಲಿ ಮಂಡಲ್‌ನನ್ನ ಬಂಧಿಸಿದ್ದಾರೆ. ಬಂಧಿತನಿಂದ 1 ಲಕ್ಷದ 80 ಸಾವಿರ ಮೌಲ್ಯದ 6 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಉದ್ಯೋಗಕ್ಕಾಗಿ ಪಶ್ಚಿಮ ಬಂಗಾಳದಿಂದ ಬಂದು ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 1 ಲಕ್ಷ 37 ಸಾವಿರದ 400 ಮೌಲ್ಯದ 4 ಕೆಜಿ 580 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಿ, ಆತನಿಂದ 60 ಸಾವಿರ ಮೌಲ್ಯದ 2 ಕೆಜಿ ಗಾಂಜಾ ಮತ್ತು 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಹಾಗೂ ಜಿನ್ಯೋನ್ ಎಂಬ ಆರೋಪಿಯಿಂದ 20 ಸಾವಿರ ಮೌಲ್ಯದ 10MDMA ವಶಪಡಿಸಿಕೊಂಡಿದ್ದಾರೆ.
ಕೋರಮಂಗಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1 ಲಕ್ಷದ 50 ಸಾವಿರ ಮೌಲ್ಯದ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಸಂದ್ಗುಂಟೆಪಾಳ್ಯ ಪೊಲೀಸರು ಆರೋಪಿ ಮೊಹಮ್ಮದ್ ಹರಿಕೃಷ್ಣನನ್ನು ಬಂಧಿಸಿ, 10 ಲಕ್ಷ ಮೌಲ್ಯದ 482 ಗ್ರಾಂ MDMA ಟ್ಯಾಬ್ಲೆಟ್ 4 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದು, ಸದ್ಯ ಬಂಧಿತರ ಪೈಕಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಮಗನಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸದ್ಯ ತನಿಖೆ ಮುಂದುವರೆದಿದೆ. ಬಂಧಿತ ಆರೋಪಿಗಳೆಲ್ಲಾ ಬಹುತೇಕ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದು, ಆರೋಪಿಗಳನ್ನ ಹೆಚ್ವಿನ ತನಿಖೆಗೊಳಪಡಿಸಲಾಗಿದೆ.