ಬೆಂಗಳೂರು: ಉಪ ಚುನಾವಣೆ 2019ರ ಮತ ಎಣಿಕೆಯ ಫಲಿತಾಂಶ ನಾಳೆ ಹೊರ ಬೀಳಲಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮತ ಎಣಿಕೆ ಪ್ರಕ್ರಿಯೆಯ ಎಣಿಕೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ನಾಳೆ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 144ಸೆಕ್ಷನ್ ಜಾರಿಯಾಗಲಿದೆ.
ಗುಪ್ತಚರ ಇಲಾಖೆಯ ಮಾಹಿತಿಯಂತೆ ಚುನಾವಣೆ ಮತ ಎಣಿಕೆ ನಡೆದ ನಂತರ ಕೆಲ ಕಿಡಿಗೇಡಿಗಳು ಅಹಿತಕರ ಘಟನೆಗಳನ್ನ ನಡೆಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಮತ ಎಣಿಕೆ ಸಮಯದಲ್ಲಿ ಹಾಗೂ ನಂತರ ಕಿಡಿಗೇಡಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟು ಮಾಡುವುದನ್ನ ತಡೆಯಲು ಈ ನಿಷೇಧಾಜ್ಞೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ಇವತ್ತು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಎಲ್ಲೆಲ್ಲಿ ಮತ ಎಣಿಕೆ:
ಶಿವಾಜಿನಗರ ಕ್ಷೇತ್ರ: ಮೌಂಟ್ ಕಾರ್ಮಲ್ ಮಹಿಳಾ ಪಿ.ಯು ಕಾಲೇಜು
ಕೆ.ಆರ್ ಪುರಂ ಹಾಗೂ ಮಹಾಲಕ್ಷ್ಮಿ ಲೇಔಟ್: ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್
ಯಶವಂತಪುರ: ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್
ಹೊಸಕೋಟೆ ಕ್ಷೇತ್ರದ ಮತ ಎಣಿಕೆ ದೇವನಹಳ್ಳಿಯ ಆಕಾಶ್ ಇಂಟರ್ನ್ಯಾಷನಲ್ - ಶಾಲೆಯಲ್ಲಿ ನಡೆಯಲಿದೆ.
ಈ ಸ್ಥಳಗಳ ಸುತ್ತಮುತ್ತ 200 ಮೀಟರ್ ಅಳತೆಯ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ವು ಜನರು ಕಾನೂನು ಬಾಹಿರವಾಗಿ ಗುಂಪು ಗುಂಪಾಗಿ ನಿಲ್ಲುವುದು ಹಾಗೂ ಓಡಾಡುವುದು, ಮಾರಕಾಸ್ತ್ರ, ಕೀಟಲೆ ಮಾಡುವುದನ್ನ ನಿಷೇಧಿಸಲಾಗಿದೆ.