ಬೆಂಗಳೂರು: ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಶಕ್ತಿ ಯೋಜನೆ ವಿಸ್ತರಣೆ, ಬೈಕ್ ಟ್ಯಾಕ್ಸಿ ನಿಷೇಧ ಸೇರಿ ವಿವಿಧ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ 37 ಸಂಘಟನೆಗಳು ನೀಡಿದ್ದ ಬೆಂಗಳೂರು ಬಂದ್ ಬೆನ್ನಲ್ಲೇ ಸಾರಿಗೆ ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಇಂದು 37 ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನಾನು ಕೂಡ ನಿಮ್ಮ ಪರವಾಗಿಯೇ ಇದ್ದೇನೆ. ಶಕ್ತಿಯೋಜನೆ ಮತ್ತು ತೆರಿಗೆ ಹೆಚ್ಚಳ ನಮ್ಮ ಸರ್ಕಾರ ಅವಧಿಯಲ್ಲಿ ಆಗಿವೆ. ಉಳಿದೆಲ್ಲ ಬೇಡಿಕೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿವೆ. ಆದರೂ ಬಹುತೇಕ ಎಲ್ಲಾ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿದ್ದೇನೆ. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನ ಖಚಿತವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಆಟೋಗಳಿಗೆ ರಹದಾರಿ ನಿರ್ಮಾಣ ವಿಚಾರ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಓಲಾ-ಊಬರ್ ಬಗ್ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ. ಹಿರಿಯ ವಕೀಲರರೊಂದಿಗೆ ಮಾತನಾಡಿ ಆದಷ್ಟು ಬೇಗ ಅದನ್ನು ಕ್ಲಿಯರ್ ಮಾಡುವ ಪ್ರಯತ್ನ ಮಾಡುತ್ತೇವೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 17 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಕೇವಲ ₹ 4 ಕೋಟಿಯಿತ್ತು. ಈ ಬಾರಿ ₹ 17 ಕೋಟಿ ಮೀಸಲಿಟ್ಟಿದ್ದೇವೆ. ಅದಷ್ಟು ಬೇಗ ಚಾಲಕರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತೇನೆ. ಚಾಲಕರಿಗೆ ವಸತಿ ಯೋಜನೆ ವಿಚಾರ ಸಂಬಂಧ ಸಚಿವ ಜಮೀರ್ ಅಹ್ಮದ್ ಅವರ ಬಳಿ ಮಾತಾಡಿದ್ದೇನೆ. ಚಾಲಕರಿಗೆ ವಸತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೋಟಾ ನೀಡಲು ಮನವಿ ಮಾಡುತ್ತೇವೆ. ಬೈಕ್ ಟ್ಯಾಕ್ಸಿ ಬಗ್ಗೆ ನಾಲ್ಕು ಕೇಸ್ಗಳಿದ್ದು, ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಬೆಳಗ್ಗೆಯಿಂದ ಏನೆಲ್ಲಾ ಸಮಸ್ಯೆ ಆಯ್ತು.. ಇದಕ್ಕೂ ಮುನ್ನ ಬೆಂಗಳೂರು ಬಂದ್ಗೆ ಚಾಲಕರ ಒಕ್ಕೂಟ, ಆಟೋ ಚಾಲಕರ ಸಂಘಟನೆಗಳು, ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬಂದ್ಗೆ ಕರೆ ನೀಡಿದ್ದರಿಂದ ಬಸ್, ಕ್ಯಾಬ್ ಹಾಗೂ ಆಟೋಗಳು ರಸ್ತೆಗಿಳಿಯಲಿಲ್ಲ. ಇದರಿಂದ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಯಾಣಿಕರಿಗೆ ತೊಂದರೆಯಾಯಿತು. ಈ ಸಮಸ್ಯೆ ಹೋಗಲಾಡಿಸಲು ಬಿಎಂಟಿಸಿ ತನ್ನ ಸೇವೆಯಲ್ಲಿ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ಕೈಗೊಂಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಕ್ಯಾಬ್ ಚಾಲಕರ ಮುಷ್ಕರದಿಂದ ಕ್ರಿಕೆಟಿಗ ಅನಿಲ್ ಕುಂಬ್ಳೆಗೂ ಬಿಸಿ ತಟ್ಟಿತ್ತು. ಏರ್ ಪೋರ್ಟ್ನಲ್ಲಿ ವೊಲ್ವೊ ಬಸ್ ಹತ್ತಿ ಅವರು ಸಂಚರಿಸಿದರು.
ಶಾಲಾ ಮಕ್ಕಳ ಬಸ್ ಮಾಲೀಕರ ಸಂಘವು ಬಂದ್ಗೆ ಬೆಂಬಲ ಕೊಟ್ಟಿದ್ದರಿಂದ ಬಹುತೇಕ ಶಾಲೆಗಳು ರಜೆ ಘೋಷಿಸಿದ್ದವು. ಕೆಲ ಶಾಲೆಗಳು ಪರಿಸ್ಥಿತಿ ಅರಿತು ರಜೆ ನೀಡಿದ್ದರಿಂದ ಪೋಷಕರಿಗೆ ತಿಳಿಯದೆ ತಮ್ಮಮಕ್ಕಳನ್ನು ಶಾಲೆ ಬಳಿ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಶಾಲೆಗೆ ರಜೆ ನೀಡಿರುವುದು ಸರಿಯಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ರಾಪಿಡೊ ಚಾಲಕರ ಮೇಲೆ ಹಲ್ಲೆ: ಬಂದ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಪಿಡೊ ಚಾಲಕರ ಮೇಲೆ ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಆಟೊ ಸಂಚರಿಸುವುದನ್ನ ಕಂಡು ಆಟೊ ಅಡ್ಡಗಟ್ಟಿ ಟೈರ್ಗೆ ಗಾಳಿ ತೆಗೆದು ಹಲ್ಲೆ ನಡೆಸಿದರು. ಆನಂದ್ ರಾವ್ ಫ್ಲೈ ಓವರ್ ಬಳಿ ಸಂಚರಿಸುತ್ತಿದ್ದ ರಾಪಿಡೊ ಚಾಲಕನ ಮೇಲೆ ಚಾಲಕರು ಹಲ್ಲೆ ನಡೆಸಿದರು. ಮೌರ್ಯ ವೃತ್ತ ಬಳಿ ವೈಟ್ ಬೋರ್ಡ್ನಲ್ಲಿ ಪ್ರಯಾಣಿಕರನ್ನು ಕೂರಿಸಿ ಹೋಗುತ್ತಿರುವ ಬಗ್ಗೆ ಅರಿತ ಚಾಲಕರು ಕಾರು ತಡೆದು ಮೊಬೈಲ್ ಕಸಿದು ಗಾಡಿ ಪಂಕ್ಚರ್ ಮಾಡಿ ಕಳುಹಿಸಿದರು. ಇನ್ನು ಬಾಣಸವಾಡಿ ಬಳಿ ಬೈಕ್ ಟ್ಯಾಕ್ಸಿ ತಡೆದು ಬೈಕ್ ಜಖಂ ಮಾಡಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಭೆ: ಬೆಂಗಳೂರು ರಾಜ್ಯ ಖಾಸಗಿ ಸಂಘಟನೆಗಳ ಒಕ್ಕೂಟ ಸೇರಿ 37 ಸಂಘಟನೆಯವರು ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ಜಾಥ ನಡೆಸಿದರು. ಮುಂಜಾಗ್ರತ ಕ್ರಮವಾಗಿ ಫ್ರೀಡಂಪಾರ್ಕ್ ಸುತ್ತಮುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಅಲ್ಲದೆ ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯ ಸರ್ಕಾರ ಜಾರಿ ತಂದಿರುವ ಶಕ್ತಿ ಯೋಜನೆಯನ್ನ ಖಾಸಗಿ ಬಸ್ ಮಾಲೀಕರಿಗೂ ವಿಸ್ತರಿಸಬೇಕು. ಮಹಿಳಾ ಪ್ರಯಾಣಕರ ಸಂಖ್ಯೆಯಲ್ಲಿ ಕಡಿಮೆಯಾದ ಬರುವ ಆದಾಯ ಖೋತವಾಗಿದೆ. ಅಕ್ರಮವಾಗಿ ಚಲಿಸುತ್ತಿರುವ ರಾಪಿಡ್ ಬೈಕ್ ಟ್ಯಾಕ್ಸಿ ಸಂಪೂರ್ಣ ನಿಷೇಧ ಮಾಡಬೇಕು. ಅಸಂಘಟಿತ ವಾಣಿಜ್ಯ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನೇತೃತ್ವದ ವಹಿಸಿದ್ದ ನಟರಾಜ್ ಶರ್ಮಾ ಒತ್ತಾಯಿಸಿದ್ದರು.
ಇದನ್ನೂ ಓದಿ: ಹಗರಣಗಳಿಂದ ಪಾರಾಗಲು ನನ್ನ ವಿರುದ್ಧ ಹೈಕಮಾಂಡ್ಗೆ ದೂರು: ಬಿ ಕೆ ಹರಿಪ್ರಸಾದ್