ಬೆಂಗಳೂರು: ಕೊರೊನಾ ಸೋಂಕಿತರಿಗೆ ನಿಗದಿತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಇದಕ್ಕೆ ಕಾರಣ ಆ್ಯಂಬುಲೆನ್ಸ್ಗಳ ಕೊರತೆ. ಇದರ ಪರಿಹಾರಕ್ಕಾಗಿ ಸರ್ಕಾರ ಟಿಟಿ ವಾಹನಗಳ ವ್ಯವಸ್ಥೆಗೆ ಮುಂದಾಗಿರುವುದೇನೋ ಸರಿ. ಆದರೆ ರಿಪೇರಿಗೆ ನಿಂತಿರುವ ಆ್ಯಂಬುಲೆನ್ಸ್ಗಳನ್ನು ಮಾತ್ರ ಮರು ಬಳಕೆ ಮಾಡಲು ಚಿಂತನೆ ನಡೆಸಿಲ್ಲ.
ರಾಜ್ಯದಲ್ಲಿ ಸುಮಾರು 711 ಆರೋಗ್ಯ ಕವಚದ ಆ್ಯಂಬುಲೆನ್ಸ್ಗಳಿವೆ. ಪ್ರತಿ ಜಿಲ್ಲೆಯಲ್ಲಿ ತಾಲೂಕಿಗೆ ಒಂದರಂತೆ ಜಿಲ್ಲಾ ಮಟ್ಟದಲ್ಲಿ ಎರಡು ಆ್ಯಂಬುಲೆನ್ಸ್ಗಳನ್ನು ಉಪಯೋಗಿಸಲಾಗುತ್ತಿದೆ. ಬೆಂಗಳೂರಿನಲ್ಲಿ 80 ವಾಹನಗಳು ಇದ್ದು ಸದ್ಯ ಅದರಲ್ಲಿ 40 ಕೋವಿಡ್-19ಗಾಗಿ, ಉಳಿದ 40 ಕೋವಿಡೇತ್ತರ ತುರ್ತುಸೇವೆಗೆ ಬಳಸಲಾಗುತ್ತಿದೆ. ಇತ್ತ ಖಾಸಗಿಯಲ್ಲಿ 800 ವಾಹನಗಳಿದ್ದು, ಅದರಲ್ಲಿ 70 ಆ್ಯಂಬುಲೆನ್ಸ್ಗಳನ್ನು ಬಿಬಿಎಂಪಿಗೆ ನೀಡಲಾಗಿದೆ. ಇವು ವಿಶೇಷವಾಗಿ ಕೋವಿಡ್ಗಾಗಿ ಮಾತ್ರ ಬಳಕೆಯಾಗುತ್ತಿವೆ.
ಇಷ್ಟೆಲ್ಲದರ ನಡುವೆ ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ಮುಂದುವರೆದಿದೆ. ಆ್ಯಂಬುಲೆನ್ಸ್ ಬದಲಿಗೆ ಸದ್ಯ ಟಿಟಿ ವಾಹನ ಬಳಸುತ್ತಿದ್ದು, ಕೆಲವು ಸೋಂಕಿತರಿಗೆ ಆ್ಯಂಬುಲೆನ್ಸ್ ಅಗತ್ಯವಿಲ್ಲ. ಕೋವಿಡ್ ಕೇರ್ ಸೆಂಟರ್ಗೆ ಯಾವುದಾದರೂ ವಾಹನ ಸಾಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಆದರೆ, ಆ್ಯಂಬುಲೆನ್ಸ್ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕಿದೆ. ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪದಲ್ಲಿ ಸಣ್ಣ ಸಮಸ್ಯೆಯಿಂದ ಹಲವು ಆ್ಯಂಬುಲೆನ್ಸ್ಗಳು ನಿಂತಿವೆ. ಇವುಗಳು ನಿಂತು ತುಕ್ಕು ಹಿಡಿಯುತ್ತಿರುವುದನ್ನು ತಪ್ಪಿಸಬಹುದಾಗಿದೆ. ಟಿಟಿ ವಾಹನಗಳನ್ನು ಹೊರಗಿನಿಂದ ಕರೆಸಿ ದುಂದುವೆಚ್ಚ ಮಾಡುವ ಬದಲು, ಅದೇ ಹಣದಲ್ಲಿ ವಾಹನಗಳನ್ನು ರಿಪೇರಿ ಮಾಡಿಸಿ ಬಳಸಬಹುದಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಒಬ್ಬ ಸೋಂಕಿತನನ್ನು ಆಸ್ಪತ್ರೆಗೆ ರವಾನಿಸಿದ ನಂತರ ಇಡೀ ಆ್ಯಂಬುಲೆನ್ಸ್ಅನ್ನು ರಾಸಾಯನಿಕ ಬಳಸಿ ಶುಚಿಗೊಳಿಸಬೇಕು. ಆ್ಯಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಬದಲಿಸಿ, ಸ್ನಾನ ಮಾಡಬೇಕು. ಇಷ್ಟೆಲ್ಲ ಮಾಡಲು ಕನಿಷ್ಠ ನಾಲ್ಕು ತಾಸಾದರೂ ಬೇಕು. ಇದರಿಂದ ಒಂದು ಆ್ಯಂಬುಲೆನ್ಸ್ ಒಂದು ದಿನದಲ್ಲಿ ಗರಿಷ್ಠ ನಾಲ್ಕರಿಂದ ಐದು ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಾಧ್ಯ. ಹೀಗಾಗಿ, ಪರ್ಯಾಯ ವ್ಯವಸ್ಥೆಯೊಂದಿಗೆ ರೋಗಿಗಳಿಗೆ ತೊಡಕು ಆಗದಂತೆ ಸರ್ಕಾರ ಗಮನಿಸಬೇಕಿದೆ. ಸಣ್ಣ ಪುಟ್ಟ ಸಮಸ್ಯೆ ಇರುವ ವಾಹನಗಳನ್ನು ಗುಜುರಿಗೆ ಹಾಕುವ ಬದಲು ರಿಪೇರಿ ಮಾಡಿಸಿ ಮರು ಬಳಕೆಯನ್ನು ಕಷ್ಟದ ಸಮಯದಲ್ಲಿ ಬಳಸಬಹುದಾಗಿದೆ.