ಬೆಂಗಳೂರು: ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ಮತ್ತು ಅವರ ಬೆಂಬಲಿಗರಿಗೆ ನಗರದ 37 ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಮತ್ತು ಅವರ 21 ಮಂದಿ ಬೆಂಬಲಿಗರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಕೋರ್ಟ್ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿಗಳು ತಲಾ 1 ಲಕ್ಷ ರೂಪಾಯಿ ಮೊತ್ತದ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ, ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಾರದು, ಸಾಕ್ಷ್ಯ ನಾಶಪಡಿಸಬಾರದು ಎಂಬ ಇತ್ಯಾದಿ ಸಾಮಾನ್ಯ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲ ಇಸ್ಮಾಯಿಲ್ ಜಬೀವುಲ್ಲಾ ವಾದಿಸಿ, ಆರೋಪಿತರು ಸಾಮಾಜಿಕ ಜವಾಬ್ದಾರಿ ಹೊತ್ತಿರುವಂತವರು. ಹಾಗೆಯೇ ಪೊಲೀಸರು ಆರೋಪಿಸಿರುವುಂತೆ ಅವರ ಕರ್ತವ್ಯಕ್ಕೆ ಅಡ್ಡಿ ಮಾಡಿಲ್ಲ. ಜನಪ್ರತಿನಿಧಿಯಾದ ಇಮ್ರಾನ್ ಅವರನ್ನು ಅಭಿಮಾನಿಗಳು ಸಹಜವಾಗಿ ಸ್ವಾಗತಿಸಿದ್ದಾರೆ. ಇಷ್ಟಕ್ಕೇ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆಂದು ಆರೋಪಿಸಿ ಭಾರತೀಯ ದಂಡ ಸಂಹಿತೆ 353ರ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ವಿಶ್ಲೇಷಣೆಯಂತೆ ಐಪಿಸಿ 353ರಡಿ ಪ್ರಕರಣ ದಾಖಲಿಸಬೇಕಿದ್ದರೆ ಆರೋಪಿಗಳು ಅಪರಾಧಿಕ ಮನಸ್ಸಿನಿಂದ ಹಲ್ಲೆ ಮಾಡಿರಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿಲ್ಲ. ಜೊತೆಗೆ ಅಪರಾಧಿಕ ಮನಸ್ಸನ್ನೂ ಹೊಂದಿಲ್ಲ. ಹೀಗಾಗಿ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು. ವಾದ ಮಾನ್ಯ ಮಾಡಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಇಮ್ರಾನ್ ಪಾಷಾ ಮತ್ತು ಅವರ 21 ಮಂದಿ ಬೆಂಬಲಿಗರಿಗೆ ಷರತ್ತು ಬದ್ಧ ಜಾಮೀನು ಕರುಣಿಸಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ಚಿಕಿತ್ಸೆ ಪಡೆದು ಜೂ. 7ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಈ ವೇಳೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದ್ದರು. ಲಾಕ್ ಡೌನ್ ಜಾರಿಯಲ್ಲಿದ್ದುದರಿಂದ ಕೊವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದ ಜೆಜೆ ನಗರ ಪೊಲೀಸರು, ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.