ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವ್ರು ಬಾದಾಮಿ ಕ್ಷೇತ್ರದಿಂದಲೇ ಮತ್ತೊಮ್ಮೆ ಸ್ಪರ್ಧಿಸಬೇಕೆಂದು ಕ್ಷೇತ್ರದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸಿದ್ದಾರೆ. ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ವಿಚಾರ ಪ್ರಸ್ತಾಪವಾಗ್ತಿರುವಾಗಲೇ ಅಭಿಮಾನಿಗಳು ಸಿದ್ದರಾಮಯ್ಯರ ಪರ ಜೈಕಾರ ಕೂಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಐನೂರಕ್ಕೂ ಹೆಚ್ಚು ಮಂದಿ ಸ್ಥಳೀಯ ನಾಯಕ ರೇವಣಸಿದ್ದಪ್ಪ ನೂಟಗಾರ ನೇತೃತ್ವದಲ್ಲಿ ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಸಿದ್ದರಾಮಯ್ಯರನ್ನು ಭೇಟಿಯಾಗಿ ತಾವು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯನೇ ನಮ್ಮ ಬಾದಾಮಿಯ ದೊರೆ:
ರೇವಣಸಿದ್ದಪ್ಪ ನೂಟಗಾರ ಮಾತನಾಡಿ, ಸಿದ್ದರಾಮಯ್ಯನೇ ನಮ್ಮ ಬಾದಾಮಿಯ ದೊರೆ. ಇಮ್ಮಡಿ ಪುಲಿಕೇಶಿ ನಂತರ ಇವರೇ ಅಲ್ಲಿನ ದೊರೆ. ಅವರು ಚುನಾಚಣೆಗೆ ಬಾದಾಮಿ ಕ್ಷೇತ್ರದಿಂದಲೇ ನಿಲ್ಲಬೇಕು. ಆ ಕ್ಷೇತ್ರದ ಮೂಲಕವೇ ಸಿಎಂ ಆಗಬೇಕು. ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಇನ್ನೂ ಅವರು ಚಾಮರಾಜಪೇಟೆಯಲ್ಲಿ ನಿಲ್ಲುತ್ತೇನೆ ಎಂದಿಲ್ಲ. ಅಲ್ಲಿ ಅವರ ಮಾವ ಇದ್ದರು ಅಂತ ಹೇಳಿದ್ದಾರೆ. ಬಾದಾಮಿಯಿಂದಲೇ ಅವರು ಮತ್ತೊಮ್ಮೆ ಸ್ಪರ್ಧಿಸುತ್ತಾರೆ ಎಂದು ವಿಶ್ವಾಶ ವ್ಯಕ್ತಪಡಿದರು.
60 ವಾಹನಗಳ ಮೂಲಕ ಬಂದ್ರು 500ಕ್ಕೂ ಹೆಚ್ಚು ಮಂದಿ:
ಬಾದಾಮಿಯಲ್ಲೇ ಸ್ಪರ್ಧಿಸುವಂತೆ ಒತ್ತಾಯಿಸಲು ಬಾದಾಮಿಯಿಂದ 60 ಕ್ರೂಸರ್ ವಾಹನಗಳ ಮೂಲಕ 500ಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲೇ ನಿಲ್ಲಬೇಕು. ಮತ್ತೊಮ್ಮೆ ಅವರು ಸಿಎಂ ಆಗಬೇಕು. ಹಾಗಾಗಿ ಅವರಿಗೆ ಮನವಿ ಮಾಡಲು ಬಂದಿದ್ದೇವೆ. ಹಳ್ಳಿಗೆ 20 ಮಂದಿಯಂತೆ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.
ಹೌದೋ ಹುಲಿಯಾ, ಬಾದಾಮಿ ಹುಲಿಯಾ ಸಿದ್ದರಾಮಯ್ಯ:
ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ನಿನ್ನೆ ಚಾಮರಾಜಪೇಟೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದರು. ನಾನು ಚಾಮರಾಜಪೇಟೆ ಅಳಿಯ ಅಂದಿದ್ದ ಸಿದ್ದರಾಮಯ್ಯ, ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಪದೇ ಪದೇ ಚಾಮರಾಜ ಪೇಟೆಗೆ ಭೇಟಿಯಾಗಿ ಸಮಾರಂಭಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ ಆತಂಕಗೊಂಡಿರುವ ಬಾದಾಮಿಯ ಮುಖಂಡರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಇಂದು ಬೆಂಗಳೂರಿಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಾದಾಮಿ ಹುಲಿಯಾ ಸಿದ್ದರಾಮಯ್ಯ ಎಂದು ಜೈಕಾರ ಕೂಗಿ ಸಿದ್ದರಾಮಯ್ಯ ಅವರನ್ನು ಸುತ್ತುವರೆದು ಬೆಂಬಲಿಗರು ಒತ್ತಾಯಿಸಿದರು. ಹೌದೋ ಹುಲಿಯಾ, ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಕೂಗಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಸಿಎಂ ಖಡಕ್ ಸಂದೇಶ