ಬೆಂಗಳೂರು: ಪಾದರಾಯನಪುರ ಪ್ರಕರಣದಲ್ಲಿ ಈಗ ವಿಚಾರಣೆಗೆ ಒಳಗಾಗಿರುವ ಲೇಡಿ ಡಾನ್ ಫರ್ಜುವಾ ಈ ಏರಿಯಾದಲ್ಲಿ ತನ್ನದೇ ಆದ ಹಿನ್ನೆಲೆಯನ್ನು ಹೊಂದಿದ್ದಾಳೆ.
ಜನರನ್ನು ಕ್ವಾರಂಟೈನ್ಗೆ ಕರೆದೊಯ್ಯಲು ಬಂದ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲು ಈಕೆ ಕುಮ್ಮಕ್ಕು ನೀಡಿದ್ದಳು. ಈ ಹಿನ್ನೆಲೆ ಇವಳೇ ಈ ಘಟನೆಯ ಪ್ರಮುಖ ಆರೋಪಿಯಾಗಿದ್ದಾಳೆ. ಫರ್ಜುವಾ ತೃತೀಯ ಲಿಂಗಿ ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. 33 ವರ್ಷದ ಫರ್ಜುವಾ ಪಾದರಾಯನಪುರದ ನಿವಾಸಿಯಾಗಿದ್ದು, ಕೆಲ ರಾಜಕೀಯ ವ್ಯಕ್ತಿಗಳ ಜೊತೆ ಸಕ್ರಿಯ ಒಡನಾಟ ಇಟ್ಟುಕೊಂಡಿದ್ದಳು.
2015 ರಲ್ಲಿ ಚಾಮರಾಜಪೇಟೆಯ ದಂಪತಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಈ ದಂಪತಿ ನಡೆಸುತ್ತಿದ್ದ ಚೀಟಿ ವ್ಯವಹಾರದಲ್ಲಿ ಫರ್ಜುವಾ ಕೂಡ ಬಂಡವಾಳ ಹೂಡಿದ್ದಳು. ಆದರೆ, ದಂಪತಿ 2015 ರ ಕೊನೆಯಲ್ಲಿ 10 ಲಕ್ಷ ಚೀಟಿ ಹಣ ಎತ್ತಿಕೊಂಡು ಪರಾರಿಯಾಗಿದ್ದರು. ಕೆಲ ಆಪ್ತ ರಾಜಕಾರಣಿಗಳು ಹಾಗೂ ವಕೀಲರ ಮೂಲಕ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಫರ್ಜುವಾ, ಆರೋಪಿಗಳನ್ನ ನೆಲ್ಲೂರಲ್ಲಿ ಹಿಡಿದಿದ್ದಳು. ಈ ಸಾಹಸಕ್ಕೆ ಫರ್ಜುವಾ ಧೈರ್ಯ ಮೆಚ್ಚಿ ಸ್ಥಳೀಯರು ಆಕೆಗೆ ಲೇಡಿ ಡಾನ್ ಎಂದು ಹೆಸರಿಟ್ಟಿದ್ದರು.
ಇದಾದ ಬಳಿಕ ಬಿಬಿಎಂಪಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನ ಮಾಡಿಸಿಕೊಡುತ್ತಿದ್ದಳು. ಈಕೆ ಪಾದರಾಯನಪುರದ ಹಲವಾರು ಜನರಿಗೆ ಸಹಾಯ ಕೂಡ ಮಾಡುತ್ತಿದ್ದಳಂತೆ. ಇದನ್ನ ಹೊರತುಪಡಿಸಿ ಗಾಂಜಾ ಮಾರಾಟದ ಆರೋಪ ಫರ್ಜುವಾ ಮೇಲಿದೆ. ಸ್ಥಳೀಯ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಳೆ ಎಂಬ ಆಪಾದನೆ ಇದ್ದರೂ ಇದುವರೆಗೂ ಈಕೆಯ ವಿರುದ್ಧ ಯಾವ ಪ್ರಕರಣ ಕೂಡ ದಾಖಲಾಗಿಲ್ಲ. ಈಗ ಈ ಗಲಾಟೆ ಪ್ರಕರಣದಲ್ಲಿ ಬಂಧಿಯಾಗಿರುವ ಈಕೆಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.