ಬೆಂಗಳೂರು: ಊಟ ಮಾಡಿಸುತ್ತಿದ್ದಾಗ ಕಟ್ಟಡದಿಂದ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆಯಿತು. ಒಂದೂವರೆ ವರ್ಷದ ಹೆಣ್ಣು ಮಗು ದೀಕ್ಷಾ ಮೃತಪಟ್ಟಿದೆ.
ವಿನಯ್ ಮತ್ತವರ ಪತ್ನಿ ಮಗುವನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಅಜ್ಜಿ ಮೊಮ್ಮಗಳಿಗೆ (ದೀಕ್ಷಾ) ಊಟ ಮಾಡಿಸುತ್ತಿದ್ದರು. ಆಟವಾಡುತ್ತ ಬಾಲ್ಕನಿಯಲ್ಲಿದ್ದ ಕಬ್ಬಿಣದ ಸರಳು ಹಿಡಿದು ಮೇಲೆ ಹತ್ತಿದ ಮಗು ನೋಡುನೋಡುತ್ತಿದ್ದಂತೆ ಜಾರಿ ಕೆಳಗೆ ಬಿದ್ದಿದೆ. ಕೂಡಲೇ ಅಕ್ಕಪಕ್ಕದವರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.
ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ಕಳೆದ ತಿಂಗಳು ವರದಿಯಾಗಿತ್ತು. ಮಹೇಶ್ವರಿ (6) ಮೃತ ಬಾಲಕಿ. ಈಕೆ ಕಟ್ಟಡ ಕಾಮಗಾರಿಗಾಗಿ ಬಂದಿದ್ದ ದಂಪತಿಯ ಮಗಳು. ಐದು ಅಂತಸ್ತಿನ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಬಾಲಕಿ ಆಟವಾಡುತ್ತಾ ಲಿಫ್ಟ್ ನಿರ್ಮಾಣಕ್ಕೆ ತೋಡಲಾಗಿದ್ದ ಗುಂಡಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ಮಗುವಿನ ತಲೆಗೆ ಗಂಭೀರ ಗಾಯ: ಮತ್ತೊಂದೆಡೆ ಬೆಂಗಳೂರಿನ ಕೆಂಗೇರಿ ಸಮೀಪದ ಅಪಾರ್ಟ್ಮೆಂಟ್ವೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಜ್ಞಾನಭಾರತಿ ಎನ್ಕ್ಲೇವ್ ಅಪಾರ್ಟ್ಮೆಂಟ್ನ ರಾಹುಲ್ ಗಾಯಗೊಂಡಿರುವ ಮಗು. ದುರ್ಘಟನೆ ವೇಳೆ ಪಾಲಕರು ಮನೆಯಲ್ಲೇ ಇದ್ದರು. ತಾಯಿ ಅಂಬಿಕಾ ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿರುವಾಗ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ರಾಹುಲ್ ಅಯತಪ್ಪಿ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಮಗುವಿನ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ