ಹೊಸಕೋಟೆ : ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಜನತೆಗೆ ಕೆರೆಗಳಿಗೆ ನೀರು ತುಂಬಿಸುವ 100 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.
ಸರ್ಕಾರ ರಚನೆಗೆ ಸಹಕರಿಸಿದ ಅನರ್ಹರಿಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಋಣ ತೀರಿಸಲು ಬಿಎಸ್ವೈ ಮುಂದಾಗಿದ್ದಾರೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ವ್ಯಾಪ್ತಿಯ 30 ಕೆರೆಗಳಿಗೆ 100 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದ ಬಿಎಸ್ವೈಗೆ, ಎಂಟಿಬಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು. ಆದರೆ ಇದೇ ಕಾರ್ಯಕ್ರಮಕ್ಕೆ ಸಂಸದ ಬಿ. ಎನ್. ಬಚ್ಚೇಗೌಡರು ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಯೋಜನೆ ಉದ್ಘಾಟಿಸಿದ ಸಿಎಂ, ತಾಲೂಕಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಮತ್ತೊಮ್ಮೆ ಎಂ. ಟಿ. ಬಿ. ನಾಗರಾಜ್ರನ್ನು ಅಯ್ಕೆ ಮಾಡುವಂತೆ ನೆರೆದಿದ್ದವರಿಗೆ ಕರೆ ನೀಡಿದರು. ಎಂ. ಟಿ. ಬಿ. ನಾಗರಾಜ್ರವರ ಎಲ್ಲಾ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಎಂ. ಟಿ. ಬಿ. ನಾಗರಾಜ್ ತಮ್ಮ ಮಾತಿನಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನು ಮಂತ್ರಿಯನ್ನಾಗಿಯೇನೋ ಮಾಡಿದರು. ಆದರೆ ಅಧಿಕಾರ ಮಾತ್ರ ನೀಡಲೇ ಇಲ್ಲವೆಂದು ಕುಟುಕಿದರು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕರಿಸಬೇಕು. ಏತ ನೀರಾವರಿಯಷ್ಟೇ ಅಲ್ಲ. ಕಾವೇರಿ ನಾಲ್ಕನೇ ಹಂತದ ಯೋಜನೆ ಮತ್ತು ಮೇಟ್ರೋ ಯೋಜನೆಯನ್ನು ಹೊಸಕೋಟೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಒಟ್ಟಾರೆ ಒಂದು ರೀತಿಯಲ್ಲಿ ಎಂ. ಟಿ. ಬಿ. ನಾಗರಾಜ್ ಹೊಸಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಿ, ಮುಖ್ಯಮಂತ್ರಿ ಬಿಎಸ್ವೈ ಬಾಯಿಂದ ತಮ್ಮೆಲ್ಲಾ ಯೋಜನಗಳಿಗೆ ಸಹಕಾರವನ್ನು ಅವರ ಬಾಯಿಂದಲೇ ಹೇಳಿಸುವ ಮೂಲಕ ಬಚ್ಚೇಗೌಡರ ಪಾಳಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದರೆ ತಪ್ಪಾಗಲಾರದು.
ಇದೇ ಸಂದರ್ಭದಲ್ಲಿ ಸ್ಥಳೀಯರು ಹೊಸಕೋಟೆಗೆ ಕಾವೇರಿ ನೀರು ಮತ್ತು ಮೆಟ್ರೋ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಇನ್ನು ವೇದಿಕೆ ಮುಂಭಾಗವೇ ಮಾಧ್ಯಮದವರಿಗೆ ಹಾಕಿದ್ದ ಟೇಬಲ್ ತೆರೆವುಗೊಳಿಸಲು ಎಂಟಿಬಿ ಬೆಂಗಲಿಗರು ಹಾಗೂ ಮಾಧ್ಯಮದವರ ನಡುವೆ ವಾಗ್ವಾದ ನಡೆದು ಮಾಧ್ಯಮದವರು ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆಯೂ ನಡೆಯಿತು.