ಬೆಂಗಳೂರು: ಕ್ಯಾಬಿನೆಟ್ ತಯಾರಿಸಿದ ಅಂಶವನ್ನು ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಪ್ರಸ್ತಾಪಿಸುವುದು ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯ. ಇದನ್ನು ಪ್ರತಿಪಕ್ಷ ಸದಸ್ಯರು ಖಂಡಿಸಿದ್ದು ವಿಪರ್ಯಾಸ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು. ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯಪಾಲರ ಭಾಷಣ ಸಂದರ್ಭ ಪ್ರತಿಪಕ್ಷ ನಾಯಕರು ಆರ್ಎಸ್ಎಸ್ ಬಗ್ಗೆ ಅವಹೇಳನ ಮಾತನಾಡಲು ಪ್ರಸ್ತಾಪಿಸಿದರು.
ಪ್ರತಿಪಕ್ಷ ನಾಯಕರು 57 ಬಾರಿ ಆರ್ಎಸ್ಎಸ್ ಪ್ರಸ್ತಾಪ ಮಾಡಿದ್ದಾರೆ. ತಮ್ಮ ನಾಯಕರ ವಿಚಾರವನ್ನೇ ಐದಾರು ಸಾರಿಯೂ ಪ್ರಸ್ತಾಪಿಸಿಲ್ಲ. ಚಡ್ಡಿ ಪ್ರಸ್ತಾಪವನ್ನೂ ಮಾಡಿದ್ದಾರೆ. ಒಂದು ಸಂಘಟನೆ ಅದರ ವಿರೋಧಿಗಳ ಗಮನವನ್ನು ಎಷ್ಟು ಸೆಳೆದಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಅಚ್ಚೇದಿನ್ ಬಂದಿದೆಯೇ ಎನ್ನುತ್ತಿದ್ದಾರೆ. ಆದರೆ, ಜನರಿಗೆ ಬಂದಿದೆ ಎಂಬ ಅಭಿಪ್ರಾಯ ಅವರದ್ದು. ಪ್ರತಿಪಕ್ಷಗಳಿಗೆ ಅಚ್ಚೇದಿನ್ ಮುಗಿದಿದೆ, ಕಚ್ಚಾ ದಿನ ಆರಂಭವಾಗಿದೆ. ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸುವ ಸಂದರ್ಭ ಪ್ರತಿಪಕ್ಷಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಭಾರತದ ಪ್ರಧಾನಿ ಮಾತಿಗೆ ಬೆಲೆ ಎಷ್ಟಿದೆ ಎನ್ನುವುದಕ್ಕೆ ರಷ್ಯಾ, ಉಕ್ರೇನ್ ಯುದ್ಧ ಮಧ್ಯೆ ನಿಲ್ಲಿಸಿ ನಮ್ಮವರನ್ನು ಸುರಕ್ಷಿತವಾಗಿ ಕರೆತಂದ ಸಾಮರ್ಥ್ಯ ನಮ್ಮದು. ಭಾರತೀಯ ಪ್ರಜೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸುರಕ್ಷಿತ ಎಂಬ ಭಾವನೆ ಮೂಡಿಸಿದ್ದು ನರೇಂದ್ರ ಮೋದಿ. ಸೈನಿಕರಿಗೆ ಶಕ್ತಿ ತುಂಬಿದ್ದಾರೆ. ಅತೃಪ್ತ ಮನಸ್ಸು, ಅಂಧ ದೃಷ್ಟಿಯಿಂದ ನೋಡಿದಾಗ ಯಾರಿಗೂ ಅಚ್ಚೇ ದಿನ್ ಕಾಣಲ್ಲ ಎಂದರು.
ಬಲಿಷ್ಠ ಭಾರತ ನಿರ್ಮಾಣವಾಗಿದೆ: ವಿಶ್ವದ ಎಲ್ಲ ರಾಷ್ಟ್ರಗಳು ನಮ್ಮದೇಶದ ಪ್ರಧಾನಿಗೆ ಗೌರವ ಕೊಡುತ್ತಾರೆ, ಸಂಕಷ್ಟದಲ್ಲಿ ನೆನೆಯುತ್ತಾರೆ, ಮಧ್ಯಸ್ಥಿಕೆ ವಹಿಸಿ ಎನ್ನುತ್ತಾರೆ. ಬಲಿಷ್ಠ ಭಾರತ ನಿರ್ಮಾಣವಾಗಿದೆ. ಇನ್ನು ಭ್ರಷ್ಟಾಚಾರ ಮಾಡಿದ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದು, ಸರ್ಕಾರದ ಧೈರ್ಯ. ಎಡಿಜಿಪಿ ವಿರುದ್ಧವೇ ಕ್ರಮ ಕೈಗೊಂಡಿದೆ. ರೈತರ ಪರ ಕೆಲಸ ಮಾಡಿದ್ದೇವೆ. ಸರ್ಕಾರದ ಒಳ್ಳೆಯದರಲ್ಲು ತಪ್ಪು ಹುಡುಕಬಾರದು. ವಿಧ್ಯಾನಿಧಿ ಉತ್ತಮ ಕಾರ್ಯ. ಸಾಕಷ್ಟು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲ ಮಾಡಿಕೊಂಡಿದ್ದಾರೆ.
ಜಲಜೀವನ್ ಮಿಶನ್ನಲ್ಲಿ ಕೂಡ ಕಸ ಹುಡುಕುವ ಯತ್ನ: ಆದರೆ ಕಲಿಕೆ ಮುಗಿದ ಮೂರು ವರ್ಷ ಕಳೆದರೂ ಉದ್ಯೋಗ ಸಿಕ್ಕಿಲ್ಲ. ಬ್ಯಾಂಕ್ಗಳು ವಸೂಲಿಗೆ ಮುಂದಾಗಿ ನೋಟಿಸ್ ನೀಡುತ್ತಿದೆ. ಇದರಿಂದ ಸರ್ಕಾರ ಸಾಧ್ಯವಾದರೆ ಸಾಲ ಮನ್ನಾ ಮಾಡಬೇಕು. ಇಲ್ಲ, ಕನಿಷ್ಠ ಬಡ್ಡಿ ಮನ್ನಾ ಆದರೂ ಮಾಡಬಹುದು. ಜಲಜೀವನ್ ಮಿಶನ್ನಲ್ಲಿ ಕೂಡ ಕಸ ಹುಡುಕುವ ಯತ್ನ ಆಗಿದ್ದು ಬೇಸರ ತಂದಿದೆ. ಪರಿಷತ್ನಲ್ಲಿ ಶಿಕ್ಷಕರ ಸಮಸ್ಯೆ ಪ್ರಸ್ತಾಪ ಆಗಿದೆ. ಶಾಲಾ ಕೊಠಡಿ ಬಗ್ಗೆ ಮಾತಾಡುತ್ತಿಲ್ಲ. ಸರ್ಕಾರ ಸರಿಸುಮಾರು 10 ಸಾವಿರ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದೇವೆ. ಸಣ್ಣ ಅಭಿನಂದನೆಯೂ ಸಲ್ಲಿಸಿಲ್ಲ ಎಂದರು.
ಮಹಿಳೆಯರು, ಬಾಣಂತಿಯರ ಸೇವೆಯನ್ನು ಸರ್ಕಾರ ವಿಸ್ತರಿಸಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕಿಯರಿಗೆ ಹಿಂದೆ ವೇತನ ಸಹಿತ ರಜೆ ಸಿಗುತ್ತಿರಲಿಲ್ಲ. ಈಗ ವೇತನ ರಹಿತ ರಜೆ ಸಿಗುತ್ತಿದೆ. ವೇತನ ನೀಡುವ ಕಾರ್ಯ ಆಗಬೇಕು. ಶಿಶು ಪಾಲನಾ ರಜೆ ಕೊಡಬೇಕು. ತಾಯಿಗೆ ಆರು ತಿಂಗಳ ರಜೆ ಸಿಗುತ್ತಿದೆ. ತಂದೆಗೂ ಈ ಸವಲತ್ತು ವಿಸ್ತರಣೆ ಆಗಬೇಕು. ತಾಯಿ ನಿಧನರಾಗಿ ಮಕ್ಕಳ ಹೊಣೆ ತಂದೆಗೆ ಬಂದಾಗ ಶಿಶುಪಾಲನಾ ರಜೆ ಸಿಗುತ್ತಿಲ್ಲ. ಸರ್ಕಾರ ಗಮನಿಸಬೇಕು. ವಾಹನ ಚಾಲಕರು, ನಿರ್ವಾಹಕರು, ಸಿಬ್ಬಂದಿಗೆ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರೀ ವಸೂಲಿ ಬಾಜಿ ನಡೆಯುತ್ತಿದೆ: ಡಿಕೆಶಿ ಆರೋಪ