ಬೆಂಗಳೂರು : ಬದುಕಿರುವಾಗ ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆ ಇದೆ. ಆದರೆ, ಇದರಲ್ಲಿ ಶೇ.4 ರಷ್ಟು ಅಂಗಾಂಗ ದೊರೆಯುತ್ತಿದೆ. ಇದರಿಂದಾಗಿ ಅನೇಕರಿಗೆ ಅಂಗಾಂಗಗಳು ದೊರೆಯದೆ ನಿಧನ ಹೊಂದುತ್ತಿದ್ದಾರೆ.
ವ್ಯಕ್ತಿ ಮರಣ ಹೊಂದಿದ ಬಳಿಕ ಅವರ ಅಂಗಾಂಗಗಳ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯವಿದೆ. ಆದರೆ, ಅನೇಕ ತಪ್ಪು ತಿಳಿವಳಿಕೆಯಿಂದ ಅಂಗಾಂಗ ದಾನ ಕಡಿಮೆಯಾಗಿದೆ. ಬದುಕಿರುವಾಗ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಜನ್ಗಳಿಗೂ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡುವ ಬಗ್ಗೆ ಇಲ್ಲಿನ ತಜ್ಞರಿಗೆ ಕೋರಲಾಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ಕುಟುಂಬಗಳ ವ್ಯಕ್ತಿಗಳಿಗೆ, ಅಗತ್ಯವಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಅಂಗಾಂಗ ಕಸಿ ಮಾಡಲು ಕ್ರಮ ವಹಿಸಲಾಗುವುದು ಎಂದರು.
ನಿಮ್ಹಾನ್ಸ್ನಲ್ಲಿ ಮೆದುಳು ಸತ್ತ ಪ್ರಕರಣಗಳು ಹೆಚ್ಚಾಗಿ ದೊರೆಯುತ್ತವೆ. ಆದ್ದರಿಂದ ಈ ಸಂಸ್ಥೆಯೊಂದಿಗೆ ಅಂಗಾಂಗ ಕಸಿಗಾಗಿ ಟೈಅಪ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ನಾಲ್ಕು ಹಳೆ ಮೆಡಿಕಲ್ ಕಾಲೇಜುಗಳಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮನೆಯೇ ಉತ್ತಮ ಐಸೋಲೇಶನ್ : ಕೇಂದ್ರ ಆರೋಗ್ಯ ಸಚಿವರ ಜೊತೆ ವಿಡಿಯೋ ಸಭೆ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಮಾತನಾಡಿದ್ದೇವೆ. ಹೋಂ ಐಸೋಲೇಶನ್ನಲ್ಲಿರುವವರ ಮೇಲೆ ಹೆಚ್ಚು ನಿಗಾ, ಇ-ಸಂಜೀವಿನಿಯಲ್ಲಿ ಎರಡನೇ ಸ್ಥಾನದಲ್ಲಿರುವುದು, ಅದಕ್ಕೂ ಹೆಚ್ಚಾಗಿ ಆಪ್ತಮಿತ್ರ ಮೂಲಕ ಟೆಲಿ ಟ್ರಯಾಜಿಂಗ್ ಮೊದಲಾದ ಮಾಹಿತಿಗಳನ್ನು ಪಡೆದಿದ್ದಾರೆ.
ಬಹಳ ಯಶಸ್ವಿಯಾಗಿ ದೂರವಾಣಿ ಮೂಲಕ ನಿರ್ವಹಣೆ ಮಾಡುತ್ತಿರುವುದು ವಿಶೇಷವಾಗಿದೆ. ಶೇ.95ರಷ್ಟು ಸೋಂಕಿತರು ಮನೆಯಲ್ಲಿದ್ದರೂ ಆತಂಕವಿಲ್ಲ. ಶೇ.4ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಿಎಸ್ವೈ ಮೊಮ್ಮಗಳು : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ
ಮರಣ ಪ್ರಮಾಣ ಅತಿ ಕಡಿಮೆ : ರಾಜ್ಯದಲ್ಲಿ ಮರಣ ಪ್ರಮಾಣ 0.005% ಮಾತ್ರ ಇದೆ. ಇದು ಅಧಿಕವಾಗಿಲ್ಲ. ಸಹ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್ ಆಡಿಟ್ ನಡೆಸಲಾಗುತ್ತಿದೆ. ಆರೋಗ್ಯ ಕ್ಷೇತ್ರದ ವಿಷನ್ ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿದ್ದಾರೆ. ದೂರದೃಷ್ಟಿಯನ್ನೊಳಗೊಂಡ ವಿಷನ್ ವರದಿ ಇದಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ವರದಿ ತಯಾರಾಗಿದೆ. ಸುಮಾರು 750 ತಜ್ಞರು ಇದರ ರಚನೆಯಲ್ಲಿ ಭಾಗಿಯಾಗಿದ್ದಾರೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ