ಬೆಂಗಳೂರು : 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಇಂದು ವಿಧಾನಸೌಧದಲ್ಲಿ ನಡೆಯಿತು. ಸಿಎಂ ಯಡಿಯೂರಪ್ಪ 118 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪದಕ ಪ್ರದಾನ ಮಾಡಿದರು.
ಕರ್ತವ್ಯ ನಿರ್ವಹಣೆಯಲ್ಲಿ ಶೌರ್ಯ, ಸಾಹಸ, ಅಸಾಧಾರಣ ಸಾಮರ್ಥ್ಯ ತೋರಿದವರಿಗೆ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ಮಾತನಾಡಿದ ಸಿಎಂ, ಕರ್ತವ್ಯ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸರು ತಮ್ಮ ದಕ್ಷತೆ ಸಾಬೀತು ಪಡಿಸಿದ್ದಾರೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜನರ ಶಾಂತಿಯುತ ಜೀವನಕ್ಕೆ ಪೊಲೀಸರು ಕಾರಣಿಭೂತರಾಗಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆಯುವಲ್ಲಿ ದಣಿವರಿಯದೆ ಹಗಲಿರುಳು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು.
ಪೊಲೀಸ್ ಗೃಹ 2020 ಯೋಜನೆಯಲ್ಲಿ ಪೊಲೀಸರಿಗೆ 11 ಸಾವಿರ ಸುಸಜ್ಜಿತ ವಸತಿ ವ್ಯವಸ್ಥೆ ಒದಗಿಸಲಾಗುತ್ತಿದೆ. ನಿರ್ಭಯಾ ಯೋಜನೆಯನ್ನು 662 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗ್ತಿದೆ. ನಿರ್ಭಯಾ ಯೋಜನೆಯಿಂದ ಮಹಿಳೆಯರಿಗೆ, ಮಕ್ಕಳಿಗೆ ಸುರಕ್ಷತೆ ಒದಗಿಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. ಬಳಿಕ ವಿಧಾನಸೌಧದ ಬಹುಮೆಟ್ಟಿಲು ಮುಂದೆ ಸಿಎಂ ಪದಕ ಪುರಸ್ಕೃತ 118 ಪೊಲೀಸ್ ಸಿಬ್ಬಂದಿ ಜೊತೆ ಭಾವಚಿತ್ರ ತೆಗೆಸಿಕೊಂಡರು.
ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಇದೀಗ ಹೊಸ ಹೊಸ ರೀತಿಯ ಅಪರಾಧಗಳು ಎದುರಾಗಿವೆ. ನಮ್ಮ ಪೊಲೀಸರು ಕೆಲ ಉತ್ತಮ ಕಾರ್ಯಾಚರಣೆಗಳ ಮೂಲಕ ಕಾನೂನು ಅಪರಾಧವನ್ನು ಸೋಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಹ್ಯಾಕಿಂಗ್ನಂಥ ಹೊಸ ಅಪರಾಧಗಳು ಹೆಚ್ಚಾಗಿವೆ. ಹ್ಯಾಕರ್ಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಸಾಫ್ಟ್‌ವೇರ್ ಹ್ಯಾಕ್, ಖಾಸಗಿ ಜೀವನದಲ್ಲಿ ಹ್ಯಾಕ್ ಮಾಡುವ ಮೂಲಕ ವಿವಿಧ ರೀತಿಯ ಅಪರಾಧಗಳನ್ನು ಮಾಡುತ್ತಿದ್ದಾರೆ. ಇದನ್ನು ಎದುರಿಸಲು ನಮ್ಮ ಪೊಲೀಸರು ತಾಂತ್ರಿಕವಾಗಿ ಸನ್ನದ್ಧರಾಗಬೇಕು.
ನಾವು ಸನ್ನದ್ಧರಾದ್ರೆ ಹೊಸ ಕ್ರೈಂಗಳನ್ನು ಸಂಪೂರ್ಣ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಗಾರಿಗಳು ಈ ನಿಟ್ಟಿನಲ್ಲಿ ಮುಂದಾಳತ್ವ ತೆಗೆದುಕೊಳ್ಳಬೇಕು. ಹೊಸ ತಾಂತ್ರಿಕ ಸವಾಲುಗಳನ್ನು ನಿಭಾಯಿಸಿ ಕೆಳ ಅಧಿಕಾರಿಗಳಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.