ಬೆಂಗಳೂರು: ಪ್ರಯಾಣಿಕನೋರ್ವ ಆಟೋದಲ್ಲಿ ಬಿಟ್ಟು ಹೋಗಿದ್ದ 2.57 ಲಕ್ಷ ರೂ. ಹಣವನ್ನು ಆಟೋ ಚಾಲಕ ಚಾಮರಾಜಪೇಟೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚಾಮರಾಜಪೇಟೆಯ ಆನಂದಪುರದ ನಿವಾಸಿ ಮೋಹನ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಎಂದಿನಂತೆ ಇಂದು ಬೆಳಗ್ಗೆ ಶಿರಸಿ ಸರ್ಕಲ್ ಬಳಿ ಪ್ರಯಾಣಿಕನೋರ್ವರು ಆಟೋ ಹತ್ತಿದ್ದಾರೆ. ಬಳಿಕ ಪ್ರಯಾಣಿಕ ಹೇಳಿದ ಜಾಗಕ್ಕೆ ಕರೆದೊಯ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಹಿಂಬದಿ ಸೀಟಿಯಲ್ಲಿ ನೋಡಿದಾಗ ಬ್ಯಾಗ್ ಬಿಟ್ಟು ಹೋಗಿರುವುದು ತಿಳಿದಿದೆ. ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ನಲ್ಲಿ 2.57 ಲಕ್ಷ ರೂ.ಹಣವಿರುವುದು ಗೊತ್ತಾಗಿದೆ.
ಕೂಡಲೇ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಹೋಗಿ ಹಣ ಸಮೇತ ಬ್ಯಾಗ್ ಒಪ್ಪಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮೆಚ್ಚುಗೆ ಸೂಚಿಸಿದ್ದಾರೆ.