ಬೆಂಗಳೂರು: ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ನಡೆಸಿದ್ದ ಸಿದ್ದರಾಮಯ್ಯ ಕಾಲದಲ್ಲಿನ ಆಡಳಿತ ವೈಫಲ್ಯ, ಹಿಂದೂ ವಿರೋಧಿ ನೀತಿ, ಓಲೈಕೆ ರಾಜಕಾರಣದ ಕುರಿತು 'ಸಿದ್ದು ನಿಜ ಕನಸುಗಳು' ಕೃತಿಯಲ್ಲಿದ್ದು, ಅದರಲ್ಲಿ ಏನಿದೆ ಎನ್ನುವುದನ್ನು ನೋಡದೇ ನ್ಯಾಯಾಲಯದಿಂದ ತಡೆ ತಂದಿರುವುದು ಇವರಲ್ಲಿ ಎಷ್ಟು ಅಸಹಿಷ್ಣುತೆ ಇದೆ ಎನ್ನುವುದಕ್ಕೆ ನಿದರ್ಶನ ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ನಗರದ ಟೌನ್ ಹಾಲ್‌ನಲ್ಲಿ ಆಯೋಜನೆಗೊಂಡಿದ್ದ 'ಸಿದ್ದು ನಿಜ ಕನಸುಗಳು' ಕೃತಿ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಪಾಲ್ಗೊಳ್ಳಲು ಆಗಮಿಸಿದ್ದ ಚಕ್ರತೀರ್ಥ ಕಾರ್ಯಕ್ರಮ ರದ್ದುಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಕಾರ್ಯಕ್ರಮ ನಡೆಸಬಾರದು ಎಂದು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಅನೇಕ ಪೋಸ್ಟ್ ಗಳನ್ನು ಬರೆಯುತ್ತಿದ್ದರು. ಅವರ ಅಸಹಿಷ್ಣುತೆ ಪರಾಕಾಷ್ಠೆಯನ್ನು ತಲುಪಿದೆ. ಅದು ಎಷ್ಟರ ಮಟ್ಟಿಗೆ ಇದೆ ಎಂದರೆ ಪುಸ್ತಕದಲ್ಲಿ ಏನಿದೆ ಎಂದು ನೋಡದೇ ಪುಸ್ತಕವನ್ನೇ ಯಾರೂ ಓದಬಾರದು ಎನ್ನುವ ಮಟ್ಟಕ್ಕೆ ಹೋಗಿದ್ದಾರೆ.
ಕೋರ್ಟ್ ತೀರ್ಪು ನಾವು ಗೌರವಿಸುತ್ತೇವೆ: ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸಲಿದ್ದೇವೆ. ಆದರೆ, ನ್ಯಾಯಾಲಯದಲ್ಲಿ ನಮ್ಮ ಹೋರಾಟವೂ ಮುಂದುವರೆಯಲಿದೆ. ಅವರು ಯಾವ ಕಾರಣಕ್ಕೆ ತಡೆಯಾಜ್ಞೆ ಕೊಡಬೇಕೆಂದು ಕೋರಿದ್ದಾರೆ ಎನ್ನುವುದನ್ನು ನಾವು ಪರಿಶೀಲಿಸಬೇಕಿದೆ. ಒಟ್ಟಾರೆಯಾಗಿ ಇವರಿಗೆ ಯಾವುದೇ ವಿಷಯದಲ್ಲೂ ಸಹಿಷ್ಣತೆ ಇಲ್ಲ ಎನ್ನುವುದನ್ನು ಇವರ ನಡೆ ತೋರಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ಮೋದಿ ಸರ್ಕಾರದ ವೇಳೆ ಅಸಹಿಷ್ಣುತೆ ಅಸಹಿಷ್ಣುತೆ ಎನ್ನುತ್ತಿದ್ದರು. ಯಾರಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಈಗ ಗೊತ್ತಾಗುತ್ತಿದೆ ಎಂದರು.
ಪುಸ್ತಕದ ತಿರುಳು ಏನಿದೆ ಎಂಬುದನ್ನು ನೋಡದೇ ಪುಸ್ತಕವನ್ನು ಯಾರು ಓದಬಾರದು ಎಂದು ಆ ಪುಸ್ತಕವನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡುತ್ತಾರೆ. ನ್ಯಾಯಾಲಯದ ಬಾಗಿಲು ತಟ್ಟಿ ತಡೆಯಾಜ್ಞೆ ತರುತ್ತಾರೆ ಎಂದರೆ ಇವರಿಗೆ ಸಹಿಷ್ಣತೆ ಇದೆಯಾ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಐದು ವರ್ಷದ ಆಳ್ವಿಕೆಯಲ್ಲಿ ಅವರ ವೈಫಲ್ಯ ಮತ್ತು ಅವರ ಆಳ್ವಿಕೆ ಯಾವ ರೀತಿ ಇತ್ತು ಎನ್ನುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ಟಿಪ್ಪು ಜಯಂತಿ ಮಾಡಿ ಹಿಂದುಗಳ ವಿರೋಧ ಕಟ್ಟಿಕೊಂಡಿದ್ದರು.
25-26 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆರ್ಥಿಕ ಸಂಕಷ್ಟ ಬಂದಿತ್ತು. ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳಲ್ಲಿ ಇವರು ಅತಿ ಹೆಚ್ಚಿನ ಸಾಲ ಮಾಡಿದ್ದರು. ಹಿಂದೂಗಳಿಗೆ ಯಾವ ರೀತಿ ತೊಂದರೆ ಕೊಟ್ಟಿದ್ದರು. ಯಾವ ರೀತಿ ಓಲೈಕೆ ರಾಜಕಾರಣ ಮಾಡಿದ್ದರು ಎನ್ನುವುದು ಸೇರಿದಂತೆ ಅವರ ವೈಫಲ್ಯದ ರಾಜಕಾರಣದ ವಿವರವನ್ನು ನಾವು ಇದರಲ್ಲಿ ವಿತ್ ಫ್ಯಾಕ್ಟ್ ಪ್ರಕಾರ ಕೊಟ್ಟಿದ್ದೆವು ಎಂದು ನಮಗೆ ಆಯೋಜಕರು ಹೇಳಿದ್ದರು.
ಈ ಕೃತಿಯಲ್ಲಿ ಇದನ್ನೆಲ್ಲಾ ಉಲ್ಲೇಖಿಸಲಾಗಿತ್ತು ಎಂದು ನಮಗೆ ಮಾಹಿತಿ ನೀಡಿದ್ದರು. ಇದರಲ್ಲಿ ಯಾವುದೇ ತಪ್ಪುಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ, ಇದಕ್ಕೆ ನಮ್ಮದು ಸಹಮತವಿದೆ, ಸುಳ್ಳುಗಳನ್ನ ಹೇಳಿದ್ದರೆ ಅದನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಪುಸ್ತಕದಲ್ಲಿ ಏನಿದೆ? ಎಂದು ನೋಡದೇ ನೇರವಾಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ ಎಂದರೆ ಅಸಹಿಷ್ಣುತೆ ಇವರಲ್ಲಿ ಎಷ್ಟು ತುಂಬಿ ತುಳುಕುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದರು.
ಪುಸ್ತಕದ ಬಿಡುಗಡೆ ಬಗ್ಗೆ ಮಾತನಾಡಲು ಸಿಎಂ ನಿರಾಕರಣೆ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ನಿರಾಕರಿಸಿದ್ದಾರೆ. ಆನಂದ್ ರಾವ್ ವೃತ್ತದ ಬಳಿ ಮಾತನಾಡಿದ ಅವರು, ಪುಸ್ತಕ ವಿಚಾರದ ಪ್ರಶ್ನೆಗೆ ಮೌನ ವಹಿಸಿದರು. ಟೌನ್ ಹಾಲ್‌ನಲ್ಲಿ ಇಂದು ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ, ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.
ಸಚಿವ ಅಶ್ವತ್ಥ್ ನಾರಾಯಣ ಪುಸ್ತಕ ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದರು. ಚಿಂತಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ಸಂತೋಷ್ ತಮ್ಮಯ್ಯ, ಸಂವಾದದ ಸಂಪಾದಕ ವೃಷಾಂಕ್ ಭಟ್, ಬರಹಗಾರ ರಾಕೇಶ್ ಶೆಟ್ಟಿ ಉಪಸ್ಥಿತಿ ಇರಲಿದ್ದು, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದರು. ಈ ಸಂಬಂಧ ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನ: 7 ದಿನ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದ್ದು, ದೇಶದ 28 ರಾಜ್ಯಗಳಿಂದ 8 ಕೇಂದ್ರಾಡಳಿತ ಪ್ರದೇಶಗಳಿಂದ ಯುವಕರು ಬರುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಜ.12ಕ್ಕೆ ಯುವಜನೋತ್ಸವದಲ್ಲಿ ಯುವಕರ ಕುರಿತ ಎಲ್ಲ ವಿಚಾರಗಳ ಬಗ್ಗೆ ಮೋದಿ ಭಾಷಣ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ವೇಳೆ ತಿಳಿಸಿದರು.
ಓದಿ: ಸಿದ್ದು ನಿಜ ಕನಸು ಪುಸ್ತಕ ಬಿಡುಗಡೆ ವಿಚಾರ: ಪ್ರತಿಕ್ರಿಯಿಸಲು ಸಿಎಂ ಬೊಮ್ಮಾಯಿ ನಿರಾಕರಣೆ