ಬೆಂಗಳೂರು: ಮಧ್ಯ ರಸ್ತೆಯಲ್ಲಿ ಬೈಕ್ ಚಲಾಯಿಸಬೇಡಿ ಅಂದಿದಕ್ಕೆ ಆಕ್ರೋಶಗೊಂಡು ಯುವಕರ ಗುಂಪು ಕಾರು ಓಡಿಸುತ್ತಿದ್ದ ಯುವಕನನ್ನು ಹಿಂಬಾಲಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿ ನಡೆದಿದೆ.
ನವೀನ್ ಹಲ್ಲೆಗೊಳಗಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ನವೀನ್ ತಾಯಿ ಪದ್ಮಾ ಹಾಗೂ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಂದು ಮಧ್ಯಾಹ್ನ ನಂಜಪ್ಪ ಸರ್ಕಲ್ ಬಳಿ ಗಾಂಜಾ ನಶೆಯಲ್ಲಿದ್ದ ಮೂವರು ಯುವಕರು ಬೈಕಿನಲ್ಲಿ ತ್ರಿಬಲ್ ರೈಡ್ ಮಾಡಿ ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರು.
ಇದೇ ವೇಳೆ ನಂಜಪ್ಪ ವೃತ್ತದಿಂದ ಎದುರು ಮಾರ್ಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ನವೀನ್, ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಕಂಡು ರಸ್ತೆ ಮಧ್ಯದಲ್ಲಿ ಬರಬೇಡಿ ಸೈಡಿನಲ್ಲಿ ವಾಹನ ಚಲಾಯಿಸಿ ಅಂದಿದ್ದಾರೆ. ಇಷ್ಟಕ್ಕೆ ಆರೋಪಿಗಳು ಅಸಮಾಧಾನ ವ್ಯಕ್ತಪಡಿಸಿ ನವೀನ್ ನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಆರೋಪಿಗಳು ನವೀನ್ ಕಾರು ಫಾಲೋ ಮಾಡಿಕೊಂಡು ಮನೆ ಬಳಿ ಬಂದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಇದೇ ವೇಳೆ ಹಲ್ಲೆ ನಡೆಸಿದ ಮೂವರ ಪೈಕಿ ಇಬ್ಬರು ಎಸ್ಕೇಪ್ ಆದರೆ ಮತ್ತೋರ್ವ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ. ವಿದ್ಯಾರಣ್ಯಪುರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸದ್ಯ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.