ಬೆಂಗಳೂರು: ಎಟಿಎಂಗೆ ಹಾಕಬೇಕಿದ್ದ 64 ಲಕ್ಷ ರೂ.ಹಣ ಹಾಗೂ ಅತ್ತೆ ಮಗಳ ಸಮೇತ ಪರಾರಿಯಾಗಿದ್ದ ಚಾಲಕ ಕೊನೆಗೂ ಸುಬ್ರಮಣ್ಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮಂಡ್ಯ ಮೂಲದ ಚಿಕ್ಕಬಿದ್ದರಕಲ್ಲು ನಿವಾಸಿ ಯೋಗೇಶ್ ಬಂಧಿತ ಆರೋಪಿ. ಸೆಕ್ಯೂರ್ ವ್ಯಾಲಿ ಕಂಪನಿಯ ಕ್ಯಾಬ್ ಡ್ರೈವರ್ ಆಗಿದ್ದ ಚಾಲಕ ಯೋಗೇಶ್, ಫೆ.2ರಂದು ನವರಂಗ್ ರಸ್ತೆಯಲ್ಲಿ ಎಟಿಎಂಗೆ ಹಾಕಬೇಕಿದ್ದ 64 ಲಕ್ಷ ರೂಪಾಯಿ ಹಣವನ್ನು ಕದ್ದು ಸ್ನೇಹಿತರ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ. ಸ್ವಿಚ್ ಆಫ್ ಮಾಡಿಕೊಂಡಿದ್ದ ಈತನ ಮೊಬೈಲ್ ನೆಟ್ವರ್ಕ್ ಪರಿಶೀಲಿಸಿದಾಗ ಮೈಸೂರಿನಲ್ಲಿರುವುದು ಗೊತ್ತಾಗಿದೆ.
ಚಾಲಾಕಿಯ ಚಲನವಲನದ ಬಗ್ಗೆ ನಿಗಾವಹಿಸಿದ್ದ ಪೊಲೀಸರು ಇದೀಗ ಈತನನ್ನು ಬಂಧಿಸಿದ್ದಾರೆ. ಈತನಿಂದ 15 ಸಾವಿರ ರೂಪಾಯಿ ಜಪ್ತಿ ಮಾಡಿಕೊಂಡಿದ್ದು, ಉಳಿದ ಹಣ ಏನು ಮಾಡಿದ ಎಂಬುದರ ಬಗ್ಗೆ ಸುಬ್ರಮಣ್ಯನಗರ ಪೊಲೀಸರು ಖದೀಮನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣ ಹಿನ್ನೆಲೆ : ಆಯಾ ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬುವ ಕಾಂಟ್ರಾಕ್ಟ್ ಹೊಂದಿದ್ದ ಸೆಕ್ಯೂರ್ ವ್ಯಾಲಿ ಏಜೆನ್ಸಿಯ ವಾಹನ ಫೆ.2ರಂದು ಬ್ಯಾಂಕುಗಳಿಗೆ ಹಣ ತುಂಬಲು ಸುಮಾರು ಒಂದೂವರೆ ಕೋಟಿಯಷ್ಟು ಹಣವನ್ನು ಹೊತ್ತು ತಂದಿತ್ತು. ಅಂದು ಸಂಜೆ ಆರು ಗಂಟೆ ವೇಳೆ ನವರಂಗ್ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಮ್ಯಾನೇಜರ್ ಮತ್ತು ಗನ್ ಮ್ಯಾನ್ ಎಟಿಎಂ ಒಳ ಹೋಗಿದ್ದಾರೆ. ಇದೇ ವಾಹನದಲ್ಲಿಯೇ ಇದ್ದ ಯೋಗೇಶ್ ಉಳಿದ ಸಿಬ್ಬಂದಿ ಒಳ ಹೋಗುತ್ತಿದ್ದಂತೆ 64 ಲಕ್ಷದ ಎರಡು ಬ್ಯಾಗ್ಗಳನ್ನು ದೋಚಿ ಗಾಡಿಯನ್ನ ಲಾಕ್ ಮಾಡಿಕೊಂಡು ಪರಾರಿಯಾಗಿದ್ದ.