ಬೆಂಗಳೂರು : ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಬಸವೇಶ್ವರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್, ಟ್ಯಾಬ್, ಸಮವಸ್ತ್ರ, ಮಹಿಳೆಯರಿಗೆ ಟೈಲರಿಂಗ್ ಯಂತ್ರ ಹಾಗೂ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಹಾಯ ಹಸ್ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಧನ ಸಹಾಯ ಚೆಕ್‌ಗಳನ್ನು ವಿತರಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವ ಹಾಗೂ ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕಾರ್ಯವನ್ನೂ ಮಾಡಿಲ್ಲ.
ವ್ಯಾಪಕ ಅವ್ಯವಹಾರ ನಡೆಸಿದ್ದು ಮಾತ್ರವಲ್ಲದೆ ಸಾವಿರಾರು ಮಂದಿ ಸಾವಿಗೆ ಕಾರಣವಾಗಿದೆ. ಮೃತರಿಗೆ ಸೂಕ್ತ ಪರಿಹಾರ ನೀಡುವ ಕಾರ್ಯ ಸಹ ಆಗಿಲ್ಲ. ಸಾವಿನ ಸಂಖ್ಯೆಯನ್ನು ಸಹ ಮುಚ್ಚುವ ಕಾರ್ಯ ಮಾಡಲಾಗಿದೆ.
ಕೊಟ್ಟರೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಸಾಂಕ್ರಮಿಕ ಸಮಸ್ಯೆಯನ್ನು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿರೋದು ವಿಪರ್ಯಾಸ ಎಂದರು.
ಪ್ರತಿಪಕ್ಷವಾಗಿ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ಶಕ್ತಿಮೀರಿ ಜನರ ಪರವಾಗಿ ಕಾರ್ಯನಿರ್ವಹಿಸಿದೆ. ಸರ್ಕಾರದ ವಿರುದ್ಧ ಜನರಿಗೆ ಇರುವ ಅಸಹನೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ.
ಜನರಿಗೂ ಸಹ ನಮ್ಮನ್ನ ಬಿಟ್ಟರೆ ಉತ್ತಮ ಆಡಳಿತವನ್ನು ಬೇರೆ ಯಾವ ಪಕ್ಷದಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಮನವರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಜನರ ಆಯ್ಕೆ ಕಾಂಗ್ರೆಸ್ ಆಗಿರಲಿದೆ ಎಂದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಶಿವರಾಜು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಡಾ. ಹೆಚ್ ಸಿ ಮಹಾದೇವಪ್ಪ, ಹೆಚ್ ಎಂ ರೇವಣ್ಣ, ಚಲನಚಿತ್ರ ನಟ, ನಿರ್ದೇಶಕ ಎಸ್. ನಾರಾಯಣ್, ಮಾಜಿ ಶಾಸಕ ಅಶೋಕ ಪಟ್ಟಣ, ಪಾಲಿಕೆ ಮಾಜಿ ಸದಸ್ಯ ಕೃಷ್ಣಮೂರ್ತಿ ಹಾಗೂ ಮತ್ತಿತರರು ಹಾಜರಿದ್ದರು.
ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಇಂದು ಮಂಡ್ಯ ಜಿಲ್ಲೆಯ ಮೈಸೂರು ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದರು. ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ನಗರಕ್ಕೆ ಆಗಮಿಸಿದ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.