ಆನೇಕಲ್(ಬೆಂ.ನಗರ ಜಿಲ್ಲೆ): ಆರ್ಟಿಐ ಕಾರ್ಯಕರ್ತನಿಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಮುರಳಿ ಹಲ್ಲೆಗೊಳಗಾದ ಆರ್ಟಿಐ ಕಾರ್ಯಕರ್ತ. ಆನೇಕಲ್ ತಾಲೂಕಿನ ಸೋಂಪುರ ಗ್ರಾಮದ ಸರ್ವೇ ನಂಬರ್ 30/1 ಮತ್ತು ಚಿಕ್ಕದುನ್ನಸಂದ್ರ ಗ್ರಾಮದ ಸರ್ವೇ ನಂಬರ್ 7/2 ರಲ್ಲಿ ಒಟ್ಟು 4 ಎಕರೆ 37 ಗುಂಟೆ ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಡ್ರೀಮ್ಸ್ ಇನ್ ಫ್ರಾ ಇಂಡಿಯಾ ಪ್ರೈ ಲಿಮಿಟೆಡ್ ಕಂಪನಿ ಒತ್ತುವರಿ ಮಾಡಿಕೊಂಡಿದ್ದನ್ನು ಸರ್ಕಾರ ತೆರವು ಮಾಡಿ ಮುಟ್ಟುಗೋಲು ಹಾಕಿಕೊಂಡಿತ್ತು.
ಸರ್ಕಾರದ ಈ ಕ್ರಮವನ್ನು ಧಿಕ್ಕರಿಸಿ ಸ್ಥಳೀಯ ಮಾಡ್ರನ್ ಸ್ಪೇಸ್ ಕಂಪನಿ (ಯತೀಶ್ ಮತ್ತು ಕಾಡ ಅಗ್ರಹಾರ ಮಂಜುನಾಥ್ )ಅವರು ಕಾಮಗಾರಿ ಮುಂದುವರೆಸಿತ್ತು. ಇದನ್ನು ಪ್ರಶ್ನಿಸಿ ಆರ್ಟಿಐ ಕಾರ್ಯಕರ್ತ ಮುರಳಿ ಎಂಬುವರು ಸರ್ಕಾರಕ್ಕೆ ಮಾಹಿತಿ ಕೋರಿ ವಿವರ ಕೇಳಿದ್ದರು. ಇದನ್ನು ಮನಗಂಡ ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ನಿಲ್ಲಿಸಿ ಸರ್ಕಾರದ ಸ್ವತ್ತು ಎಂದು ಎಚ್ಚರಿಕಾ ಫಲಕ ನೆಟ್ಟು ಆಸ್ತಿಯನ್ನು ಮತ್ತೊಮ್ಮೆ ವಶಪಡಿಸಿಕೊಂಡಿದ್ದರು.
ಇದರಿಂದ ಕೆರಳಿದ ಮಾಡ್ರನ್ ಸ್ಪೇಸ್ ಕಂಪನಿಯ ಕೇಶವ, ಬಿಕ್ಕನಹಳ್ಳಿಯ ನವೀನ್, ಜಗದೀಶ್ ತಂಡ ಮುರಳಿ ಕಾರನ್ನು ಅಡ್ಡಗಟ್ಟಿ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ‌್ಯಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.