ಬೆಂಗಳೂರು : ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಓಲೈಕೆಯ ಪ್ರಣಾಳಿಕೆಯಾಗಿದೆ. ಮುಸ್ಲಿಮರ ಓಲೈಕೆಗಾಗಿ ಬಜರಂಗದಳ ನಿಷೇಧ ಬಗ್ಗೆ ಹೇಳಿದೆ. ಪಿಎಫ್ಐ ಪ್ರಚೋದಿತ ಪ್ರಣಾಳಿಕೆ ಇದಾಗಿದ್ದು, ಪಿಎಫ್ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಕರ್ನಾಟಕ ಪ್ರಣಾಳಿಕೆಯಲ್ಲಿ ಐತಿಹಾಸಿಕ ಘೋಷಣೆಗಳನ್ನು ಮಾಡಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ ಸ್ವಾಗತಾರ್ಹ. ಬಿಜೆಪಿಯ ಪ್ರಣಾಳಿಕೆಯು ದೇಶಾದ್ಯಂತ ಏಕರೂಪ ನಾಗರೀಕ ಸಂಹಿತೆ ಜಾರಿ ಬೇಡಿಕೆಗೆ ಪೂರಕವಾಗಿ ಬಂದಿದೆ. 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದಲ್ಲೂ ನಮ್ಮಲ್ಲಿ ಈಗಲೂ ರಾಷ್ಟ್ರೀಯ ಪೌರತ್ವ ನೋಂದಣಿ ವ್ಯವಸ್ಥೆ ಬಂದಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಲು ಈ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವುದು ಮತ್ತೊಂದು ಉತ್ತಮ ನಡೆ. ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ಕೊಡಲಾಗಿತ್ತು. ಅಂಬೇಡ್ಕರ್ ಅವರ ಸಂವಿಧಾನದಲ್ಲೇ ಇಲ್ಲದ ಮೀಸಲಾತಿ ಕೊಡಲಾಗಿತ್ತು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಹಾಗಾಗಿ ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರ ಮಾಡಿರುವ ನಮ್ಮ ಪಕ್ಷದ ನಿಲುವು ಒಳ್ಳೆಯದು ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆ ವಿಚಾರ ಕುರಿತು ಕಾಂಗ್ರೆಸ್ ವಿರುದ್ಧ ಹಿಮಂತ್ ಬಿಸ್ವಾ ಶರ್ಮಾ ಕಿಡಿ ಕಾರಿದರು. ಕಾಂಗ್ರೆಸ್‌ನವರು ಯಾಕೆ ಪಿಎಫ್ಐ ನಿಷೇಧಿಸಲಿಲ್ಲ. ಧರ್ಮ, ಜಾತಿ ಒಡೆಯುವ ರಾಜಕಾರಣ ಮಾಡಿಕೊಂಡು ಕಾಂಗ್ರೆಸ್ ಬರುತ್ತಿದೆ. ಕಾಂಗ್ರೆಸ್‌ನವರು 40% ಆರೋಪ ಮಾಡುತ್ತಿದ್ದಾರೆ. ಇದು ಸುಳ್ಳು ಆರೋಪ, ಆದರೆ ಬೋಫೋರ್ಸ್ ಹಗರಣದಲ್ಲಿ 40% ಗಿಂತಲೂ ಹೆಚ್ಚು ಕಮಿಷನ್ ಪಡೆಯಲಾಗಿತ್ತು. ರಾಜೀವ್ ಗಾಂಧಿಯವರೇ ಕಾಂಗ್ರೆಸ್ ಸರ್ಕಾರದಲ್ಲಿ 90% ಕಮಿಷನ್ ಇದೆ ಎಂದು ಆರೋಪ ಮಾಡಿದ್ದರು. ರಾಹುಲ್ ಗಾಂಧಿ ಇಲ್ಲಿ ಬಂದು ಗ್ಯಾರಂಟಿ ಯೋಜನೆ ಕೊಡುತ್ತಿದ್ದಾರೆ. ರಾಹುಲ್ ಗಾಂಧಿ ಯಾರು? ಅವರ ಭವಿಷ್ಯಕ್ಕೆ ಗ್ಯಾರಂಟಿ ಇಲ್ಲ. ಅಂಥವರು ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆ ಮಾಡುತ್ತಿರೋದು ಹಾಸ್ಯಾಸ್ಪದ. ರಾಹುಲ್ ಗೆ ಗ್ಯಾರಂಟಿ ಇದ್ದಿದ್ರೆ ಅಮೇಥಿ ಕ್ಷೇತ್ರದಲ್ಲೇ ಮುಂದುವರೆದಿರುತ್ತಿತ್ತು. ಕಾಂಗ್ರೆಸ್ಗೆ ಗ್ಯಾರಂಟಿ ಇದ್ದಿದ್ರೆ ಬಾಬರಿ ಮಸೀದಿ ವಿವಾದ ಯಾವಾಗಲೋ ಬಗೆಹರಿಯುತ್ತಿತ್ತು ಎಂದರು.
ಬಜರಂಗದಳ ಬ್ಯಾನ್ ಮಾಡೋದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿದೆ. ಪಿಎಫ್‌ಐ, ಮುಸ್ಲಿಂ ಲೀಗ್ ಬ್ಯಾನ್ ಬಗ್ಗೆ ಸಿದ್ದರಾಮಯ್ಯ ಯಾಕೆ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಬೊಮ್ಮಾಯಿ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಆದರೆ ಹೆಚ್ಚಳ ಆಗಿರುವುದು ಡಿಕೆ ಶಿವಕುಮಾರ್ ಆಸ್ತಿ. ಆದರೂ 40% ಕಮಿಷನ್ ಆರೋಪ ಮಾಡುತ್ತಿದ್ದಾರೆ. ಅವರ ಭ್ರಷ್ಟಾಚಾರದ ಆರೋಪ ನಿಜಕ್ಕೂ ಹಾಸ್ಯಾಸ್ಪದ ಎಂದು ಟೀಕಿಸಿದರು.
ಕರ್ನಾಟಕದ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವಿಚಾರ ತುಂಬಲಾಗಿದೆ. ಆದರೆ ಕಿತ್ತೂರು ರಾಣಿ ಚೆನ್ನಮ್ಮ, ಬಸವೇಶ್ವರ, ಕೆಂಪೇಗೌಡ ವಿಚಾರಗಳನ್ನೇ ಮರೆತಿತ್ತು. ಮೊಘಲ್ ದೊರೆಗಳ ವಿಚಾರವನ್ನೇ ಪಠ್ಯದಲ್ಲಿ ತುಂಬಲಾಗಿತ್ತು. ಕೆಂಪೇಗೌಡ ಯಾರು, ಬಸವೇಶ್ವರ ಯಾರು ಅನ್ನೋ ವಿಚಾರ ಮರೆತಿದೆ. ಸ್ಥಳೀಯ ನಾಯಕರನ್ನೇ ಮರೆತಿದೆ. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಾಣ ತೆತ್ತವರನ್ನೇ ಮರೆತಿದೆ. ಇವರು ನಮ್ಮ ಪಠ್ಯದ ಬಗ್ಗೆ ಟೀಕಿಸಿದ್ದಾರೆ. ಇಂತಹವರು ಪಠ್ಯ ಬದಲಿಸುವ ಭರವಸೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮತದಾರರಿಗೆ ಗ್ಯಾರಂಟಿ ಕೊಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಇಲ್ಲ. ಅವರ ಗ್ಯಾರಂಟಿಗೆ ಯಾವ ಗ್ಯಾರಂಟಿ ಇದೆ. ಕರ್ನಾಟಕದ ಜನತೆಗೆ ಈ ರೀತಿಯ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ : 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ: ಡಿಕೆ ಶಿವಕುಮಾರ್