ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಿಗೆ ಬಂದ ಮೇಲೆ ಬಿಟ್ ಕಾಯಿನ್(Bitcoin scam) ಆರೋಪವಿರುವ ಕಾಂಗ್ರೆಸ್ ನಾಯಕರ ಮಕ್ಕಳ ವಿಚಾರಣೆ ನಡೆಸುವಂತೆ ಬಿಜೆಪಿಯಿಂದ ದೂರು ನೀಡಲಾಗುತ್ತದೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿದ ಅವರು, ಸಿಎಂ ಬೊಮ್ಮಾಯಿಯವರು ನೂರು ದಿನ ಆಡಳಿತ ಪೂರೈಸಿ ಜನಪರ ಯೋಜನೆ ಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ರಚನಾತ್ಮಕ ಬೆಂಬಲ ಕೊಡಬೇಕಿತ್ತು. ಆದರೆ, ಕಾಂಗ್ರೆಸ್ಗೆ ತಮ್ಮ ಒಳಜಗಳಗಳನ್ನು ನಿಭಾಯಿಸೋದಿಕ್ಕಾಗ್ತಿಲ್ಲ. ಅದಕ್ಕೆ ಸಿಎಂ ವಿರುದ್ಧ ಬಿಟ್ಕಾಯಿನ್ ಆರೋಪ ಮಾಡುತ್ತಿದ್ದಾರೆ ಎಂದರು.
ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ದೆಹಲಿಯಲ್ಲಿ ಮಾಧ್ಯಮಗೋಷ್ಟಿ ಮಾಡಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಈ ರೀತಿ ಮಾಡಿದ್ದಾರೆ. ರಫೇಲ್ ಡೀಲ್ನಲ್ಲಿ ಪಡೆದಿರುವ ಕಮಿಷನ್ ಬಗ್ಗೆ ಸುರ್ಜೇವಾಲ ಸ್ಪಷ್ಟನೆ ಕೊಡಬೇಕಿತ್ತು ಎಂದು ಹೇಳಿದರು.
ಕಳೆದೊಂದು ವಾರದಿಂದ ಡಿ.ಕೆ ಶಿವಕುಮಾರ್ ಬಿಟ್ ಕಾಯಿನ್ ಬಗ್ಗೆ ಮಾತಾಡುತ್ತಿಲ್ಲ. ಎಲ್ಲೋ ಒಂದು ಕಡೆ ಡಿಕೆಶಿಗೂ ಲಿಂಕ್ ಇರಬಹುದಾ? ಎಂಬ ಅನುಮಾನ ಬರುತ್ತದೆ. ನಲಪಾಡ್, ದರ್ಶನ್ ಲಮಾಣಿಯವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಬಿಜೆಪಿ ಒತ್ತಾಯ ಮಾಡುತ್ತಿದೆ ಎಂದರು.
ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನವರ ಶಾಮೀಲು ಇದೆ. ಬಿಟ್ ಕಾಯಿನ್ ಕಳೆದುಕೊಂಡವರು ಕಾಂಗ್ರೆಸ್ ಪಕ್ಷದವರೇ ಇರಬಹುದು. ಕಾಂಗ್ರೆಸ್ ಪಕ್ಷದಲ್ಲಿ ಕಪ್ಪು ಹಣ ಇಡ್ಕೊಂಡಿರೋರೇ ಬಿಟ್ಕಾಯಿನ್ ಕಳೆದುಕೊಂಡಿರೋ ಅನುಮಾನ ಇದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿ ಎಂದು ಅಶ್ವಥ್ ನಾರಾಯಣ್ ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾಡಿರುವ ಆರೋಪಗಳಲ್ಲಿ ಆಧಾರ ಇಲ್ಲ. ಒಂದೇ ಒಂದು ದಾಖಲೆ ಅವರು ಕೊಟ್ಟಿಲ್ಲ. ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗ ಶ್ರೀಕೃಷ್ಣನ ಬಂಧನವಾಗಿತ್ತು. ಡ್ರಗ್ ಕೇಸ್ನಲ್ಲಿ ಶ್ರೀಕೃಷ್ಣ(ಶ್ರೀಕಿ) ನನ್ನು ಬಂಧಿಸಿ ಬೊಮ್ಮಾಯಿ ಆಗ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಆದರೆ, ಕಾಂಗ್ರೆಸ್ ಡ್ರಗ್ ಕೇಸ್ ಬಿಟ್ಟು ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶ್ರೀಕಿಗೆ ಕಾಂಗ್ರೆಸ್ನ ಶಾಸಕರು, ಮಾಜಿ ಸಚಿವರ ಮಕ್ಕಳ ಜತೆ ಸಂಪರ್ಕ ಇದೆ. ಇದರ ಬಗ್ಗೆ ಸುರ್ಜೇವಾಲ ಮಾತಾಡಬೇಕಿತ್ತು. ನಿನ್ನೆ ಯಾವುದೇ ಕಂಪನಿ ಬಿಟ್ ಕಾಯಿನ್ ಕಳ್ಳತನ ಆಗಿರುವ ಬಗ್ಗೆ ದೂರು ಕೊಟ್ಟಿಲ್ಲ. ಬಿಟ್ ಕಾಯಿನ್ ಹ್ಯಾಕ್, ಕಳ್ಳತನ ಬಗ್ಗೆ ಅಧಿಕೃತವಾಗಿ ಎಲ್ಲೂ ದೂರು ಕೊಟ್ಟಿಲ್ಲ. ಯಾವ ಕಂಪನಿಗಳೂ ದೂರು ಕೊಟ್ಟಿಲ್ಲ. ಹೀಗಿದ್ದಾಗ ಆಧಾರ ಇಲ್ಲದೇ ಕಾಂಗ್ರೆಸ್ ಆರೋಪ ಮಾಡಿದೆ. ಸರ್ಕಾರದ ಮೇಲೆ ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹೊಡೆದಿದೆ. ಕಾಂಗ್ರೆಸ್ ಪಕ್ಷದವರ ಮಕ್ಕಳು ಇರೋ ಬಗ್ಗೆ ಉತ್ತರ ಕೊಡಲಿ ಎಂದು ಒತ್ತಾಯಿಸಿದರು.
ಪ್ರಕರಣದ ಪೂರ್ಣ ತನಿಖೆ ಆಗಲಿ. ತನಿಖೆಯ ದಿಕ್ಕನ್ನು ಕಾಂಗ್ರೆಸ್ ಬದಲಿಸುವ ಯತ್ನ ಮಾಡುತ್ತಿದೆ. ತನಿಖೆ ಹಾದಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುವ ತಮ್ಮ ಚಾಳಿ ಬಿಡಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮೌನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಟೀಲ್ ಅವರು ಮೌನವಾಗಿಲ್ಲ. ಅವರು ಸಹ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ದಾಖಲೆ ಇಟ್ಟು ಮಾತಾಡಬೇಕಲ್ವಾ?. ಕಾಂಗ್ರೆಸ್ ಪಕ್ಷದವರು ಹಾದಿ ಬೀದಿಯಲ್ಲಿ ಮಾತಾಡ್ತಿದಾರೆ. ಅವರ ಹಾಗೆ ನಾವು ಮಾತಾಡಕ್ಕಾಗಲ್ಲ. ಮಂಗಳೂರಿನವರು ಭಾಗಿಯಾಗಿದ್ದಾರೆ ಅಂದರೆ ಅದು ಕಟೀಲ್ ಅವರೇ ಆಗಿರಬೇಕು ಅಂತಲ್ಲ. ಯು. ಟಿ ಖಾದರ್ ಸಹ ಮಂಗಳೂರಿನವರೇ. ಹಾಗಂತ ಪ್ರಕರಣದಲ್ಲಿ ಅವರು ಇದ್ದಾರೆ ಅಂತ ಅರ್ಥಾನಾ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸುರ್ಜೇವಾಲ ಸೇರಿ ಕೈ ನಾಯಕರು ಪುರಾಣ ಪಠಣ ಮಾಡಿದ್ದಾರೆ. ಇಬ್ಬರು ಪ್ರಭಾವಿಗಳು ಭಾಗಿಯಾಗಿದ್ದಾರೆ ಅಂದ ಮೇಲೆ ಹೆಸರು ಬಹಿರಂಗ ಮಾಡ್ತಾರೆ ಅಂದುಕೊಂಡಿದ್ದೆವು. ಹಗರಣ ಎಲ್ಲಿ ಆಗಿದೆ ಅಂತ ಕಾಂಗ್ರೆಸ್ ಪಕ್ಷದವರಿಗೂ ಗೊತ್ತಿಲ್ಲ.
ಬಿಟ್ ಕಾಯಿನ್ ಹಗರಣ ಸುರ್ಜೇವಾಲ ಬಾಯಿಯಲ್ಲಿ 704 ಮಿಲಿಯನ್ ಡಾಲರ್ ಆಗಿದೆ. ಅವರಿಗೆ ನಮ್ಮ ಮೇಲೆ ಆಪಾದನೆ ಮಾಡಲು ಪುರಾವೆ ಏನಿದೆ? ಸುರ್ಜೇವಾಲ ನಿನ್ನೆ ಕೊಟ್ಟಿದ್ದು ಪುರಾವೆ ಅಲ್ಲ. ಪುರಾಣ ಪ್ರಕರಣದ ಫಲಾನುಭವಿಗಳು ಯಾರು? ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ ಎಂದು ಹೇಳಿದರು.
ಬಿಟ್ ಕಾಯಿನ್ ಅಂತಾರಾಷ್ಟ್ರೀಯ ವ್ಯವಹಾರ, 31 ಬಿಟ್ ಕಾಯಿನ್ನಿಂದ 186 ಕ್ಕೆ ಹೋಗಿದೆ ಅಂದಿದ್ದಾರೆ. ಅದು ಒಂದು ಕಂಪನಿಯ ವ್ಯವಹಾರ. ಬಿಟ್ ಕಾಯಿನ್ ಚಲಾವಣೆ ಆ ಕಂಪನಿಯಲ್ಲಿ ನಡೆದಿದೆ. ಆ ಕಂಪನಿಯ ವಿಚಾರಣೆ ಮಾಡಲು ನಮ್ಮಿಂದ, ಅವರಿಂದ ಆಗಲ್ಲ. ಶ್ರೀಕಿ ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾನೆ. ಎಷ್ಟು ಬೇಕಾದರೂ ಆಪಾದನೆ ಮಾಡಬಹುದು, ದಾಖಲೆ ಬೇಕಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಗಳಿಗೆ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು.
ಕಾಂಗ್ರೆಸ್ಗೆ ಧೈರ್ಯ, ತಾಕತ್ ಇದ್ದರೆ ಆ ಇಬ್ಬರು ಪ್ರಭಾವಿಗಳ ಹೆಸರು ಹೇಳಲಿ. ಅದರ ಬಗ್ಗೆಯೂ ತನಿಖೆ ನಡೆಯಲಿ. ನಮ್ಮ ಪಕ್ಷದವರ ಮೇಲೆ ಅನುಮಾನ ಇದ್ದರೆ ಹೇಳಲಿ. ನಿಮ್ಮ ಪಕ್ಷದವರ ಮೇಲೆ ಅನುಮಾನ ಇದ್ದರೂ ಹೇಳಿ. ನಲಪಾಡ್, ದರ್ಶನ್ ಲಮಾಣಿಯನ್ನು ಕರೆಸಿ ಕಾಂಗ್ರೆಸ್ ನವರೇ ಕೇಳಲಿ. ಕಾಂಗ್ರೆಸ್ ಪಕ್ಷದಲ್ಲೇ ಹುಳುಕುಗಳಿವೆ. ಆದರೂ ಕಾಂಗ್ರೆಸ್ ಬೇರೆಯವರ ಹೆಗಲ ಮೇಲೆ ಬಂದೂಕಿನ ಗುರಿ ಇಟ್ಟಿದೆ ಎಂದು ವಾಗ್ದಾಲಿ ನಡೆಸಿದರು.
ಓದಿ: ಒಡಕು ರಾಜಕಾರಣ ಬಿಜೆಪಿಯ ನಿತ್ಯ ಕಾಯಕ, ಆಪರೇಷನ್ ಕಮಲ ಅಧಿಕೃತ ರಾಜಧರ್ಮ: ಹೆಚ್ಡಿಕೆ