ಬೆಂಗಳೂರು : ಕಾಂಗ್ರೆಸ್ ಕೊರೊನಾ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಿಸುತ್ತಿದೆ. ಮಾಜಿ ಶಾಸಕ ಅಶೋಕ್ ಖೇಣಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ಮಾಡಿ ₹5 ಲಕ್ಷ ಚೆಕ್ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು, ಮುಖಂಡರು ತಮ್ಮ ಕೈಲಾದ ಸಹಾಯವನ್ನು ಕೊರೊನಾ ಪರಿಹಾರ ನಿಧಿಗೆ ನೀಡಬೇಕು ಎಂದು ಸೂಚಿಸಿದ್ದರು. ಪ್ರತಿ ಶಾಸಕರು ಕನಿಷ್ಠ ಒಂದು ಲಕ್ಷ ರೂಪಾಯಿ ಮೊತ್ತವನ್ನಾದ್ರೂ ನೀಡಬೇಕು ಎಂದು ಸೂಚಿಸಿದ ಹಿನ್ನೆಲೆ ಹಲವರು ಈಗಾಗಲೇ ನೆರವು ನೀಡಿದ್ದಾರೆ. ಬಾಕಿ ಉಳಿದ ಕೆಲವರು ಕೂಡ ಚೆಕ್ ಮೂಲಕ ಹಣ ನೀಡುತ್ತಿದ್ದಾರೆ. ತಾವು ನೀಡುವ ಪರಿಹಾರ ಮೊತ್ತದ ಚೆಕ್‌ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಹಸ್ತಾಂತರ ಮಾಡುತ್ತಿದ್ದಾರೆ.
ಎಲ್ಲರಿಂದ ಚೆಕ್ ಸ್ವೀಕರಿಸಿದ ನಂತರ ಡಿಕೆಶಿ ಇದನ್ನ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಲಿದ್ದಾರೆ. ಈ ಹಸ್ತಾಂತರ ಸಂದರ್ಭ ತಮ್ಮ ಕೈಲಾದ ಮೊತ್ತದ ಸಹಾಯಧನದ ಚೆಕ್‌ನ ಕೂಡ ಸಿದ್ದರಾಮಯ್ಯಗೆ ನೀಡಲಿದ್ದಾರೆ. ಒಟ್ಟಾರೆ ಮೊತ್ತವನ್ನು ಸ್ವೀಕರಿಸಿದ ಸಿದ್ದರಾಮಯ್ಯ ತಾವು ನೀಡುವ ಪರಿಹಾರ ಮೊತ್ತವನ್ನು ಸೇರಿಸಿ ಸಂಗ್ರಹವಾದ ಹಣದಲ್ಲಿ ಒಂದು ಪಾಲನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ ಇನ್ನೊಂದು ಪಾಲನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ.
ಇದೇ ವೇಳೆ ಅಶೋಕ್ ಖೇಣಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಡಿಕೆಶಿ ಜೊತೆ ಚರ್ಚಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮಂದಿಗೆ ವಿವಿಧ ರೀತಿಯ ಸಮಸ್ಯೆಗಳಿದ್ದು ಅದನ್ನು ಸರ್ಕಾರ ಪರಿಹರಿಸುತ್ತಿಲ್ಲ. ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮತದಾರರಿಗೆ ಸಹಾಯ ಸಹಕಾರ ನೀಡಲು ತಾವು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದ್ರೆ ಮುಂದಿನ ಚುನಾವಣೆ ವೇಳೆಗೆ ಕಷ್ಟವಾಗಲಿದೆ. ರಾಜ್ಯಾದ್ಯಂತ ಪಕ್ಷವನ್ನು ತಳಮಟ್ಟದಿಂದ ಸಂಗ್ರಹಿಸುವ ಅನಿವಾರ್ಯತೆ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುವುದಾಗಿ ತಿಳಿಸಿದರು.